×
Ad

ʼನಾನು ಕಾನೂನನ್ನು ಗೌರವಿಸುತ್ತೇನೆʼ: ಜೈಲಿನಿಂದ ಬಿಡುಗಡೆ ಬಳಿಕ ಅಲ್ಲು ಅರ್ಜುನ್ ಪ್ರತಿಕ್ರಿಯೆ

Update: 2024-12-14 10:21 IST

Photo | indiatoday.in

ಹೈದರಾಬಾದ್: ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಖ್ಯಾತ ನಟ ಅಲ್ಲು ಅರ್ಜುನ್ ಶನಿವಾರ ಜೈಲಿನಿಂದ ಬಿಡುಗಡೆಯಾಗಿದ್ದು, ನಾನು ಕಾನೂನನ್ನು ಗೌರವಿಸುತ್ತೇನೆ ಮತ್ತು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ.

ಜೈಲಿನಿಂದ ಹೊರಬಂದ ತಕ್ಷಣ ಮಾಧ್ಯಮಗಳ ಜೊತೆ ಮಾತನಾಡಿದ ಅಲ್ಲು ಅರ್ಜುನ್, ಯಾರು ಕೂಡ ಆತಂಕಪಡಬೇಕಾಗಿಲ್ಲ, ನಾನು ಚೆನ್ನಾಗಿದ್ದೇನೆ, ನಾನು ಕಾನೂನು ಪಾಲಿಸುವ ನಾಗರಿಕನಾಗಿದ್ದು, ತನಿಖೆಗೆ ಸಹಕರಿಸುತ್ತೇನೆ. ಕಳೆದ 20 ವರ್ಷಗಳಿಂದ, ನಾನು ಚಲನಚಿತ್ರಗಳನ್ನು ವೀಕ್ಷಿಸಲು ಥಿಯೇಟರ್ ಗಳಿಗೆ ಹೋಗುತ್ತಿದ್ದೆ. ಅವೆಲ್ಲವೂ ಸಂತೋಷದಾಯಕ ಅನುಭವವಾಗಿತ್ತು. ಆದರೆ ಈ ಬಾರಿ, ಎಲ್ಲವೂ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ನಾನು ಮತ್ತೊಮ್ಮೆ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇದು ದುರದೃಷ್ಟಕರ ಘಟನೆಯಾಗಿದೆ. ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ. ಸಂಕಷ್ಟದ ಸಮಯದಲ್ಲಿ ಜೊತೆಗಿದ್ದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಡಿಸೆಂಬರ್ 4ರಂದು ಪುಷ್ಪ-2 ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ ನ ಸಂಧ್ಯಾ ಥಿಯೇಟರ್‌ ನಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯೋರ್ವರು ಮೃತಪಟ್ಟು, ಆಕೆಯ ಪುತ್ರ ಗಾಯಗೊಂಡಿದ್ದರು. ಘಟನೆಯ ನಂತರ, ಮೃತ ಮಹಿಳೆಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ನಗರ ಪೊಲೀಸರು ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಅಲ್ಲು ಅರ್ಜುನ್‌ ನನ್ನು ಬಂಧಿಸಿ ವಿಚಾರಣಾ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅಲ್ಲು ಅರ್ಜುನ್ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು. ತೆಲಂಗಾಣ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News