×
Ad

ಅಲ್ಲು ಅರ್ಜುನ್ ನಿವಾಸಕ್ಕೆ ಬಿಗಿ ಬಂದೋಬಸ್ತ್ ನಿಯೋಜನೆ

Update: 2024-12-23 22:32 IST

ಅಲ್ಲು ಅರ್ಜುನ್ | PTI

ಹೈದರಾಬಾದ್: ರವಿವಾರ ತೆಲುಗು ನಟ ಅಲ್ಲು ಅರ್ಜುನ್ ನಿವಾಸದಲ್ಲಿ ನಡೆದ ದಾಂಧಲೆಯ ಹಿನ್ನೆಲೆಯಲ್ಲಿ ಸೋಮವಾರ ಅವರ ನಿವಾಸಕ್ಕೆ ಒದಗಿಸಲಾಗಿರುವ ಭದ್ರತೆಯನ್ನು ಪೊಲೀಸರು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಈ ಘಟನೆಯ ಕುರಿತು ವಿರೋಧ ಪಕ್ಷಗಳು ಆಡಳಿತಾರೂಢ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಉಸ್ಮಾನಿಯ ವಿಶ್ವವಿದ್ಯಾಲಯದ ಜಂಟಿ ಕ್ರಿಯಾ ಸಮಿತಿಯ ಸದಸ್ಯರು ಎಂದು ಹೇಳಿಕೊಂಡಿರುವ ಆರು ಮಂದಿ ರವಿವಾರ ಸಂಜೆ ಅಲ್ಲು ಅರ್ಜುನ್ ನಿವಾಸದ ಆವರಣದಲ್ಲಿನ ಹೂಕುಂಡಗಳನ್ನು ಧ್ವಂಸಗೊಳಿಸಿ, ಅವರ ನಿವಾಸದ ಮೇಲೆ ಟೊಮೆಟೊಗಳನ್ನು ತೂರಿದ್ದರು.

ಈ ವಿರೂಪ ಕೃತ್ಯದಲ್ಲಿ ಭಾಗಿಯಾಗಿದ್ದ ಆರು ಮಂದಿಗೆ ಸ್ಥಳೀಯ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿದೆ.

ಈ ನಡುವೆ, ನಟ ಅಲ್ಲು ಅರ್ಜುನ್ ಅವರ 42 ವರ್ಷದಷ್ಟು ಹಳೆಯದಾದ ನಿವಾಸದ ಮೇಲೆ ದಾಂಧಲೆ ನಡೆಸಿದ ವ್ಯಕ್ತಿಗಳು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರ ಸ್ವಕ್ಷೇತ್ರವಾದ ಕೋಡಂಗಲ್ ವಿಧಾನಸಭಾ ಕ್ಷೇತ್ರಕ್ಕೆ ಸೇರಿದವರು ಎಂದು ಬಿಜೆಪಿ ಸಂಸದೆ ಡಿ.ಕೆ.ಅರುಣಾ ಆರೋಪಿಸಿದ್ದಾರೆ.

ಹೀಗಾಗಿ, ಈ ಘಟನೆಯ ಹಿಂದೆ ಕಾಂಗ್ರೆಸ್ ಪಿತೂರಿ ಇದೆಯೆ ಎಂಬ ಸಂಶಯ ಮೂಡಿದೆ ಎಂದು ಹೇಳಿರುವ ಅವರು, ಘಟನೆಯನ್ನು ಖಂಡಿಸಿದ್ದಾರೆ.

ಇದರೊಂದಿಗೆ, ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರಮುಖ ವಿರೋಧ ಪಕ್ಷವಾದ ಬಿಆರ್ಎಸ್ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News