×
Ad

ಐಎಸ್‌ಐಗೆ ರಹಸ್ಯ ಮಾಹಿತಿ ರವಾನೆ ಆರೋಪ; ಇನ್ನೋರ್ವ ಶಸ್ತ್ರಾಸ್ತ್ರ ಕಾರ್ಖಾನೆ ಉದ್ಯೋಗಿ ವಿಕಾಸ್ ಕುಮಾರ್ ಬಂಧನ

Update: 2025-03-20 20:07 IST

ಸಾಂದರ್ಭಿಕ ಚಿತ್ರ | PC : freepik.com

ಕಾನ್ಪುರ: ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಪ್ರತಿನಿಧಿಗೆ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿರುವ ಆರೋಪದಲ್ಲಿ ಕಾನ್ಪುರದ ಸೇನಾ ಶಸ್ತ್ರಾಸ್ತ್ರ ತಯರಿಕೆ ಕಾರ್ಖಾನೆಯ ಉದ್ಯೋಗಿಯೊಬ್ಬನನ್ನು ಉತ್ತರಪ್ರದೇಶದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಬುಧವಾರ ಬಂಧಿಸಿದೆ.

ಮಾರ್ಚ್ 13ರಂದು, ಇದೇ ಬೇಹುಗಾರಿಕೆ ಆರೋಪದಲ್ಲಿ ಫಿರೋಝಾಬಾದ್ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯ ಸಿಬ್ಬಂದಿಯೊಬ್ಬನನ್ನು ಲಕ್ನೋದಲ್ಲಿ ಬಂಧಿಸಲಾಗಿತ್ತು. ಅದಾದ ಒಂದು ವಾರದ ಬಳಿಕ ಈ ಬಂಧನ ನಡೆದಿದೆ.

ಬುಧವಾರ ಬಂಧನಕ್ಕೊಳಗಾದ ಆರೋಪಿಯನ್ನು ವಿಕಾಸ್ ಕುಮಾರ್ (38) ಎಂಬುದಾಗಿ ಗುರುತಿಸಲಾಗಿದೆ ಎಂದು ಉತ್ತರಪ್ರದೇಶ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಅವನು 10 ವರ್ಷಗಳಿಗೂ ಅಧಿಕ ಕಾಲ ಕಾನ್ಪುರ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಜೂನಿಯರ್ ವರ್ಕ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು.

ಫಿರೋಝಾಬಾದ್ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯ ಉದ್ಯೋಗಿ ರವೀಂದ್ರ ಕುಮಾರ್ (45), ನೇಹಾ ಶರ್ಮಾ ಎಂಬ ಹೆಸರಿನ ನಕಲಿ ಫೇಸ್‌ಬುಕ್ ಖಾತೆಯಿಂದ ಹನಿಟ್ರ್ಯಾಪ್‌ಗೊಳಗಾಗಿ ಪಾಕಿಸ್ತಾನಿ ಗುಪ್ತಚರ ಸಂಸ್ಥೆಗೆ ಹಲವಾರು ರಹಸ್ಯ ಮಾಹಿತಿಗಳನ್ನು ಕಳುಹಿಸಿದ್ದಾನೆ ಎನ್ನಲಾಗಿದೆ.

ಇದೇ ನಕಲಿ ಫೇಸ್‌ಬುಕ್ ಖಾತೆಯ ಇತರ ಭಾರತೀಯ ಸಂಪರ್ಕಗಳ ಬಗ್ಗೆ ತನಿಖೆ ನಡೆದಾಗ ವಿಕಾಸ್ ಕುಮಾರ್ ಕೂಡ ಈ ಜಾಲದಲ್ಲಿ ಶಾಮೀಲಾಗಿರುವುದು ಬಹಿರಂಗವಾಯಿತು ಎಂದು ಅಧಿಕಾರಿಗಳು ಹೇಳಿದರು.

ವಿಕಾಸ್ ಕುಮಾರ್ ಕೂಡ ನೇಹಾ ಶರ್ಮಾ ಫೇಸ್‌ಬುಕ್ ಖಾತೆಯೊಂದಿಗೆ ಈ ವರ್ಷದ ಜನವರಿಯಿಂದ ಸಂಪರ್ಕದಲ್ಲಿದ್ದ ಎಂದು ಅವರು ತಿಳಿಸಿದ್ದಾರೆ. ವಿಕಾಸ್ ಕುಮಾರ್ ‘ಲೂಡೊ’ ಆ್ಯಪ್‌ನ ಮೂಲಕ ಶಂಕಿತ ಐಎಸ್‌ಐ ಏಜಂಟ್ ಜೊತೆಗೆ ಸಂಪರ್ಕದಲ್ಲಿದ್ದ ಮತ್ತು ಪ್ರೊಡಕ್ಷನ್ ಚಾರ್ಟ್‌ಗಳು, ಉದ್ಯೋಗಿಗಳ ಹಾಜರಾತಿ ಪುಸ್ತಕ ಮತ್ತು ಕಾರ್ಖಾನೆಯ ಒಳಗಿನ ಕೆಲವು ಚಿತ್ರಗಳ ಕುರಿತ ಮಾಹಿತಿಗಳನ್ನು ಕಳುಹಿಸಿದ್ದ ಎಂದು ಆರೋಪಿಸಲಾಗಿದೆ.

ರವೀಂದ್ರ ಕುಮಾರ್‌ನಂತೆಯೇ ವಿಕಾಸ್ ಕುಮಾರ್ ಕೂಡ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಯ ನೇಹಾ ಶರ್ಮಾ ಎಂಬ ನಕಲಿ ಫೇಸ್‌ಬುಕ್ ಖಾತೆಯಿಂದ ಹನಿಟ್ರ್ಯಾಪ್‌ಗೊಳಗಾಗಿದ್ದ ಎನ್ನಲಾಗಿದೆ. ಈ ಮಹಿಳೆಯು ಮೊದಲು ಫೇಸ್‌ಬುಕ್ ಮೂಲಕ ಆರೋಪಿಯ ಸಂಪರ್ಕಕ್ಕೆ ಬಂದಳು. ಬಳಿಕ, ವಾಟ್ಸ್‌ಆ್ಯಪ್ ಮೂಲಕ ಸಂಭಾಷಣೆ ನಡೆಸಿದ್ದಾಳೆ ಎನ್ನಲಾಗಿದೆ.

ಮಹಿಳೆಯು ಆರೋಪಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಮತ್ತು ಹಣದ ಆಮಿಶ ಒಡ್ಡಿ ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾಳೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News