×
Ad

ಫೆಲೆಸ್ತೀನ್ ಮಕ್ಕಳ ಕುರಿತ ಹೇಳಿಕೆ | ಅನುಪರ್ಣ ರಾಯ್ ತಪ್ಪೇನು ಹೇಳಿಲ್ಲ : ಸಮರ್ಥಿಸಿಕೊಂಡ ಪೋಷಕರು

ವೆನಿಸ್‌ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಫೆಲೆಸ್ತೀನ್‌ ಮಕ್ಕಳ ದುಃಸ್ಥಿತಿ ಕುರಿತು ಮಾತನಾಡಿದ್ದ ನಿರ್ದೇಶಕಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ!

Update: 2025-09-10 19:33 IST

Photo | Scott A Garfitt/Invision/AP

ಹೊಸದಿಲ್ಲಿ : 82ನೇ ವೆನಿಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಭಾರತೀಯ ನಿರ್ದೇಶಕಿ ಅನುಪರ್ಣ ರಾಯ್ ಫೆಲೆಸ್ತೀನ್‌ ಮಕ್ಕಳಿಗೆ ಬೆಂಬಲ ವ್ಯಕ್ತಪಡಿಸಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೊಳಗಾಗಿದ್ದಾರೆ. ಫೆಲೆಸ್ತೀನ್‌ನ  ಮಕ್ಕಳ ಕುರಿತ ಹೇಳಿಕೆಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಗುರಿಯಾಗಿಸಿಕೊಂಡ ಬಗ್ಗೆ ಅವರ ಪೋಷಕರು ತೀವ್ರವಾಗಿ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ವೆನಿಸ್‌ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ “ಸಾಂಗ್ಸ್ ಆಫ್ ಫಾರ್ಗಾಟನ್ ಟ್ರೀಸ್” ಚಿತ್ರಕ್ಕಾಗಿ ಒರಿಝೋಂಟಿ ವಿಭಾಗದ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿಯನ್ನು ಅನುಪರ್ಣ ರಾಯ್ ಪಡೆದಿದ್ದಾರೆ.

ವೆನಿಸ್ ಚಲನಚಿತ್ರೋತ್ಸವ ವೇದಿಕೆಯಲ್ಲಿ ಮಾತನಾಡಿದ್ದ ಅನುಪರ್ಣ ರಾಯ್, "ಪ್ರತಿಯೊಂದು ಮಗುವೂ ಶಾಂತಿ, ಸ್ವಾತಂತ್ರ್ಯ ಮತ್ತು ವಿಮೋಚನೆಗೆ ಅರ್ಹವಾಗಿದೆ. ಫೆಲಸ್ತೀನ್ ಇದಕ್ಕೆ ಹೊರತಾಗಿಲ್ಲ. ಈ ಮಾತಿಗೆ ನಾನು ಚಪ್ಪಾಳೆಯನ್ನು ಬಯಸುವುದಿಲ್ಲ. ಫೆಲೆಸ್ತೀನ್ ಜೊತೆ ನಿಲ್ಲುವುದು ನಮ್ಮ ನೈತಿಕ ಜವಾಬ್ದಾರಿ. ನನ್ನ ಮಾತುಗಳಿಂದ ನನ್ನ ದೇಶದಲ್ಲಿ ನಿರಾಸೆ ಉಂಟಾಗಬಹುದು, ಆದರೆ ನನಗೆ ಅದು ಮುಖ್ಯವಲ್ಲ” ಎಂದು ಹೇಳಿದ್ದಾರೆ.

ಪಶ್ಚಿಮ ಬರ್ಧಮಾನ್ ಜಿಲ್ಲೆಯ ಕುಲ್ಟಿಯಲ್ಲಿರುವ ಅನುಪರ್ಣ ರಾಯ್ ಪೋಷಕರು, ಮಗಳ ವಿರುದ್ಧದ ಅನಗತ್ಯ ಟೀಕೆಗಳಿಂದ ತೀವ್ರವಾಗಿ ತೊಂದರೆಗೀಡಾಗಿದ್ದೇವೆ ಮತ್ತು ಚಿಂತಿತರಾಗಿದ್ದೇವೆ ಎಂದು ಹೇಳಿದರು. "ನಮ್ಮ ಮಗಳು ದೇಶವನ್ನೇ ಹೆಮ್ಮೆ ಪಡುವಂತೆ ಮಾಡಿದ ನಂತರ ಏನಾಗುತ್ತಿದೆ ಎಂಬುದರ ಬಗ್ಗೆ ನಾವು ತೀವ್ರ ಕಳವಳಗೊಂಡಿದ್ದೇವೆ ಮತ್ತು ಚಿಂತಿತರಾಗಿದ್ದೇವೆ. ಫೆಲೆಸ್ತೀನ್‌ನಲ್ಲಿನ ಮಕ್ಕಳ ದುಃಸ್ಥಿತಿಯ ಬಗ್ಗೆ ನಮ್ಮ ಮಗಳು ಮಾತನಾಡಿದ್ದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಅವಳನ್ನು ಗುರಿಯಾಗಿಸಲಾಗುತ್ತಿದೆ. ವಿವಿಧ ವರ್ಗದ ಜನರು ಅವಳನ್ನು ಗುರಿಯಾಗಿಸಿಕೊಂಡು ಅವಳು ನಿರ್ದಿಷ್ಟ ಸಮುದಾಯದ ಪರವಾಗಿ ನಿಂತಿದ್ದಾಳೆಂದು ಆರೋಪಿಸುತ್ತಿದ್ದಾರೆ. ನಾವು ಅವಳೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿದ್ದೇವೆ. ಅವಳು ಮುಂಬೈನಲ್ಲಿದ್ದಾಳೆ ಮತ್ತು ಈ ಬೆಳವಣಿಗೆಗಳ ಬಗ್ಗೆ ಅಸಮಾಧಾನಗೊಂಡಿದ್ದಾಳೆ ಎಂದು ಅನುಪರ್ಣ ಅವರ ತಂದೆ ಬ್ರಹ್ಮಾನಂದ ರಾಯ್ ಹೇಳಿದರು.

ಮಗಳ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ನೀವು ಭಾಷಣವನ್ನು ಸೂಕ್ಷ್ಮವಾಗಿ ಕೇಳಿದರೆ, ಪ್ರತಿಯೊಂದು ಮಗುವಿಗೂ ಶಾಂತಿ, ಸ್ವಾತಂತ್ರ್ಯ ಮತ್ತು ವಿಮೋಚನೆಯ ಹಕ್ಕಿದೆ ಮತ್ತು ಫೆಲೆಸ್ತೀನ್ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಮಗಳು ಹೇಳುವುದು ಕೇಳಬಹುದು. ಅವಳು ಯಾವುದೇ ಸಮುದಾಯದ ಬಗ್ಗೆ ಮಾತನಾಡಲಿಲ್ಲ. ಜಗತ್ತಿನ ಪ್ರತಿಯೊಂದು ಮಗುವಿನ ಬಗ್ಗೆ ಮಾತನಾಡಿದರು. ಅವರು ಯಾವುದೇ ತಪ್ಪು ಹೇಳಿಕೆಯನ್ನು ನೀಡಿಲ್ಲ ಎಂದು ಹೇಳಿದರು.

ಅನುಪರ್ಣ ಅವರ ತಾಯಿ ಮನೀಷಾ ರಾಯ್ ಮಾತನಾಡಿ, ಅವರೆಲ್ಲರೂ ನಮ್ಮ ಮಗಳನ್ನು ಏಕೆ ಗುರಿಯಾಗಿಸಿಕೊಂಡಿದ್ದಾರೆ? ಮಕ್ಕಳ ಕಲ್ಯಾಣದ ಬಗ್ಗೆ ಮಾತನಾಡುವುದು ತಪ್ಪೇ? ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯವನ್ನು ಹೊಂದುವ ಹಕ್ಕಿದೆ. ನಮ್ಮ ಮಗಳು ದೇಶಕ್ಕೆ ಹೆಮ್ಮೆಯನ್ನು ತಂದಿದ್ದಾರೆ. ಇಂತಹವರನ್ನು ಒಂದು ವರ್ಗದ ಜನರು ಹೀಗೆ ನಡೆಸಿಕೊಳ್ಳುತ್ತಾರೆಯೇ? ಎಂದು  ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News