×
Ad

ಯುವತಿ ಜತೆ ಮಾತನಾಡಿದ್ದಕ್ಕೆ ಜಗಳ: ಇಬ್ಬರ ಸಾವಿನಲ್ಲಿ ಅಂತ್ಯ

Update: 2023-10-02 07:37 IST

ಹೊಸದಿಲ್ಲಿ: ಯುವತಿಯೊಬ್ಬಳ ಜತೆ ಮಾತನಾಡಿದ ಕಾರಣಕ್ಕೆ ಆರಂಭವಾದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಈಶಾನ್ಯ ದೆಹಲಿಯಲ್ಲಿ ನಡೆದಿದೆ. ಭಲ್ಸ್ವಾ ಪ್ರದೇಶದಲ್ಲಿ ಈ ಘಟನೆ ಶನಿವಾರ ನಡೆದಿದೆ ಎನ್ನಲಾಗಿದ್ದು, ಘಟನೆಯಲ್ಲಿ ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ತಕ್ಷಣ ಸಮತಾ ವಿಹಾರ ಬಳಿ ಘಟನೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಆಗ ಹಿಮಾಂಶು ಎಂಬ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಪೊಲೀಸರು ಬಾಬು ಜಗಜೀವನರಾಂ ಸ್ಮಾರಕ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಆಜಾದ್ ಎಂಬ ವ್ಯಕ್ತಿ ಕೊನೆಯುಸಿರೆಳೆದರು. ವೀರೇಂದ್ರ ಎಂಬ ಮತ್ತೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ವೀರೇಂದ್ರ ಅವರ ತಮ್ಮ ಆಜಾದ್ ಹಾಗೂ ಹೇಮು ಎಂಬುವವರು ಯುವತಿ ಜತೆ ಮಾತನಾಡುತ್ತಿದ್ದರು. ಸೆಪ್ಟೆಂಬರ್ 30ರಂದು ಆಜಾದ್ ಹಾಗೂ ಹೇಮು ನಡುವೆ ಮೊಬೈಲ್ ನಲ್ಲಿ ವಾಗ್ವಾದ ನಡೆದಿತ್ತು. ಹೇಮು ಹಾಗೂ ಆತನ ಸಹೋದರ ಹಿಮಾಂಶು ಕೆಲ ಸ್ನೇಹಿತರ ಜತೆಗೂಡಿ ಆಜಾದ್ ಮೇಲೆ ಚಾಕುವಿನಿಂದ ದಾಳಿ ಮಾಡಿದರು. ಈ ಸಂಘರ್ಷದಲ್ಲಿ ಹಿಮಾಂಶು ಹಾಗೂ ಆಜಾದ್ ಮೃತಪಟ್ಟರು. ಮಧ್ಯ ಪ್ರವೇಶಿಸಿದ ವೀರೇಂದ್ರ ಅವರಿಗೂ ಗಾಯಗಳಾದವು ಎಂದು ಪೊಲೀಸರು ಹೇಳಿದ್ದಾರೆ.

ಭಾರತೀಯ ದಂಡಸಂಹಿತೆ ಸೆಕ್ಷನ್ 302 ಮತ್ತು 34ರ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News