ವಿಧಾನಸಭಾ ಚುನಾವಣೆ ಹಿನ್ನೆಲೆ: 3.5 ಕೋಟಿ ಉದ್ಯೋಗ ಸೃಷ್ಟಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು
ಅಶ್ವಿನಿ ವೈಷ್ಣವ್ PC: x.com/AshwiniVaishnaw
ಹೊಸದಿಲ್ಲಿ: ದೇಶದಲ್ಲಿ 3.5 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಒಂದು ಲಕ್ಷ ಕೋಟಿ ರೂಪಾಯಿ ಅಂದಾಜು ವೆಚ್ಚದ ಉದ್ಯೋಗ ಸಂಬಂಧಿ ಉಪಕ್ರಮಕ್ಕೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ.
ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದರೂ, ಉದ್ಯೋಗ ಸೃಷ್ಟಿ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬ ಟೀಕೆಗಳಿಗೆ ಪ್ರತಿಯಾಗಿ 2024ರ ಜುಲೈನಲ್ಲಿ ಈ ಯೋಜನೆ ಘೋಷಿಸಲಾಗಿತ್ತು. ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಗಳು ಸನಿಹದಲ್ಲಿರುವ ಹಂತದಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.
ಉದ್ಯಮ ಗಣ್ಯರು ಮತ್ತು ವಿವಿಧ ಹಕ್ಕುದಾರರ ಜತೆ ಸಮಾಲೋಚನೆ ನಡೆಸಿದ ಬಳಿಕ ಯೋಜನೆಯನ್ನು ಅಂತಿಮಪಡಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಯೋಜನೆ ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದ್ದು, ಮೊದಲನೆಯದಾಗಿ ಉದ್ಯೋಗಿ ಭವಿಷ್ಯನಿಧಿ ಸಮಸ್ಥೆಯ ಸದಸ್ಯರಾಗಿ ಮಾಸಿಕ ಒಂದು ಲಕ್ಷ ರೂಪಾಯಿ ಆದಾಯ ಗಳಿಸುವವರನ್ನು ಗುರಿ ಮಾಡಲಾಗಿದೆ. ಕೇಂದ್ರ ಸರ್ಕಾರ ಸುಮಾರು 1.9 ಕೋಟಿ ಉದ್ಯೋಗಿಗಳಿಗೆ ತಲಾ 15 ಸಾವಿರ ರೂಪಾಯಿಗಳನ್ನು ಪಾವತಿಸಲಿದೆ. 2027ರ ಆಗಸ್ಟ್ ಒಳಗಾಗಿ ಈ ಉದ್ಯೋಗ ಸೃಷ್ಟಿಯ ಉದ್ದೇಶ ಹೊಂದಿದೆ.
ಮೊದಲ ಬಾರಿಗೆ ಉದ್ಯೋಗ ಪಡೆಯುವವರಿಗೆ ಪಾವತಿಸುವ 15 ಸಾವಿರ ರೂಪಾಯಿಗಳನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಎರಡನೇ ಕಂತನ್ನು ನೇರವಾಗಿ 12 ತಿಂಗಳ ಬಳಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಯೋಜನೆಯ ಇನ್ನೊಂದು ಪ್ರಮುಖ ಅಂಶವೆಂದರೆ ಉತ್ಪಾದಕ ಕಂಪನಿಗಳು ಹೆಚ್ಚಿನ ಜನರಿಗೆ ಉದ್ಯೋಗ ನೀಡುವಂತೆ ಉತ್ತೇಜಿಸುವುದು. ಆರು ತಿಂಗಳು ಅಥವಾ ಹೆಚ್ಚು ಕಾಲ ಉಳಿಯುವ ಉದ್ಯೋಗಿಗಳಿಗೆ ಸರ್ಕಾರ ಎರಡು ವರ್ಷಗಳ ಅವಧಿಗೆ ಮಾಸಿಕ 3000 ರೂಪಾಯಿಗಳನ್ನು ನೀಡಲಿದೆ. ಉದ್ಯೋಗದಾತರಿಗೆ ಮೂರನೇ ಮತ್ತು ನಾಲ್ಕನೇ ವರ್ಷ ಈ ಸೌಲಭ್ಯವನ್ನು ನೀಡಲಾಗುತ್ತದೆ.
ಹಾಲಿ 50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಇಪಿಎಫ್ಓ ನೋಂದಾಯಿತ ಕಂಪನಿಗಳು ಕನಿಷ್ಠ ಇಬ್ಬರಿಗೆ ಉದ್ಯೋಗ ನೀಡಬೇಕಾಗುತ್ತದೆ. 50ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವವರು ಐದು ಮಂದಿಗೆ ಹೊಸದಾಗಿ ಉದ್ಯೋಗ ನೀಡಬೇಕಾಗುತ್ತದೆ ಎಂದು ಪ್ರಕಟಣೆ ವಿವರಿಸಿದೆ.