×
Ad

ಉತ್ತರಾಕಾಶಿ | ಮೇಘ ಸ್ಫೋಟ; ಕನಿಷ್ಠ ನಾಲ್ವರು ಮೃತ್ಯು, 30 ಮಂದಿ ನಾಪತ್ತೆ

ನೀರಿನಲ್ಲಿ ಕೊಚ್ಚಿ ಹೋದ ಹಲವು ಮನೆಗಳು

Update: 2025-08-05 16:40 IST
PC : PTI 

ಉತ್ತರಕಾಶಿ, ಜು. 5: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದ ಖೀರ್ ಗಂಗಾ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ಮೇಘ ಸ್ಫೋಟದಿಂದ ಉಂಟಾದ ಪ್ರವಾಹದಿಂದಾಗಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ, ಹಲವು ಮನೆಗಳು ಕೊಚ್ಚಿಕೊಂಡು ಹೋಗಿವೆ.

ಆಡಳಿತ ಇದುವರೆಗೆ ಆರು ಮಂದಿ ನಾಪತ್ತೆಯಾಗಿರುವುದಾಗಿ ದೃಢಪಡಿಸಿದೆ. ಇವರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ಅಥವಾ ಅವಶೇಷಗಳ ಅಡಿಯಲ್ಲಿ ಸಿಲುಕಿ ಸಮಾಧಿಯಾಗಿರುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ಜನನಿಬಿಡ ಧರಾಲಿ ಮಾರುಕಟ್ಟೆಯಲ್ಲಿರುವ ಹಲವು ಹೋಟೆಲು ಹಾಗೂ ಅಂಗಡಿಗಳನ್ನು ನೆರೆ ನೀರು ಆವರಿಸಿಕೊಂಡಿತು. ನೆರೆ ನೀರಿನ ರಭಸಕ್ಕೆ ಹಲವು ಕಟ್ಟಡಗಳು ಕುಸಿದು ಬಿದ್ದುವು. ಮಾರುಕಟ್ಟೆ ಪ್ರದೇಶ ಸಂಪೂರ್ಣ ನಾಶವಾಗಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ‘‘ಸಾವನ್ನಪ್ಪಿದವರ ನಿಜವಾದ ಸಂಖ್ಯೆ 30 ದಾಟಬಹುದು’’ ಎಂದು ಹೆಸರು ಹೇಳಲಿಚ್ಛಿಸದ ನಿವಾಸಿಯೋರ್ವರು ತಿಳಿಸಿದ್ದಾರೆ.

ಹಲವು ಹೊಟೇಲ್ಗಳು ಹಾಗೂ ವಾಣಿಜ್ಯ ಸಂಕೀರ್ಣಗಳು ನೆಲಸಮವಾಗಿವೆ. ಸೇನೆ (ಹರ್ಸಿಲ್), ಪೊಲೀಸ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಸೇರಿದಂತೆ ತುರ್ತು ನಿರ್ವಹಣಾ ತಂಡಗಳು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

‘‘ನಾವು ಮೇಘ ಸ್ಫೋಟ ಹಾಗೂ ಭಾರೀ ಮಳೆ ಕುರಿತು ಅಪರಾಹ್ನ 1.45ಕ್ಕೆ ದೂರವಾಣಿ ಮೂಲಕ ಮಾಹಿತಿ ಸ್ವೀಕರಿಸಿದೆವು. ಕೂಡಲೇ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಆರಂಭಿಸುವಂತೆ ಸೇನೆ, ಪೊಲೀಸ್ ಹಾಗೂ ಎಸ್ಡಿಆರ್ಎಫ್ಗೆ ಸೂಚಿಸಿದೆವು. ಅವಶೇಷಗಳೊಂದಿಗೆ 6 ಮಂದಿ ಕೊಚ್ಚಿಕೊಂಡು ಹೋಗಿರುವುದು ದೃಢಪಟ್ಟಿದೆ ’’ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ದಂಢಾದಿಕಾರಿ ಹಾಗೂ ಅಧಿಕಾರಿಗಳು ಮೇಘ ಸ್ಫೋಟ ಸಂಭವಿಸಿದ ಸ್ಥಳದಲ್ಲಿದ್ದಾರೆ ಹಾಗೂ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News