×
Ad

ಮಹಾರಾಷ್ಟ್ರ | ಸ್ವಘೋಷಿತ ಗೋ ರಕ್ಷಕರಿಂದ ಹಲ್ಲೆ : ಅಪ್ರಾಪ್ತ ಬಾಲಕ ಮೃತ್ಯು

ಅಹಲ್ಯಾನಗರದಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ

Update: 2025-11-02 13:16 IST

Photo | thehindu

ಅಹಲ್ಯಾನಗರ(ಮಹಾರಾಷ್ಟ್ರ): ಸ್ವಘೋಷಿತ ಗೋ ರಕ್ಷಕರ ಹಲ್ಲೆಯಿಂದ 17 ವರ್ಷದ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆಯನ್ನು ಖಂಡಿಸಿ ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ರಾಹುರಿ ತಾಲೂಕಿನ ಗಲ್ನಿಂಬ್ ಗ್ರಾಮದಲ್ಲಿ ಜನರು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. 

ಕೊಲ್ಹಾರ್ ಚೌಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಮಸ್ಥರು ಮತ್ತು ಧಂಗಾರ್ ಸಮುದಾಯದ ಜನರು ಪಾಲ್ಗೊಂಡು, ತ್ವರಿತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಮೃತ ಅಪ್ರಾಪ್ತ ಬಾಲಕ ಧಂಗಾರ್ ಸಮುದಾಯದಕ್ಕೆ ಸೇರಿದ್ದ, 12ನೇ ತರಗತಿಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಅಕ್ಟೋಬರ್ 27ರಂದು ಆತ ಚಿಂಚೋಲಿ ಫಾಟಾ ಗ್ರಾಮದ ಹತ್ತಿರದಿಂದ ಹಸುವೊಂದನ್ನು ಖರೀದಿಸಿ ವಾಹನದಲ್ಲಿ ಸಾಗಿಸುತ್ತಿದ್ದಾಗ, ಕೊಲ್ಹಾರ್ ಬಳಿ ನಾಲ್ವರು ವ್ಯಕ್ತಿಗಳು ತಡೆದು “ಹಸು ಕಳ್ಳಸಾಗಣೆ ಮಾಡುತ್ತಿದ್ದಾನೆ” ಎಂದು ಆರೋಪಿಸಿ ಕಬ್ಬಿಣದ ರಾಡ್ ಮತ್ತು ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ನೇರಪ್ರಸಾರ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

“ಈ ಆರೋಪಿಗಳು ನಿಯಮಿತವಾಗಿ ಜನರನ್ನು ಕಿರುಕುಳ ನೀಡಿ 5,000 ರೂಪಾಯಿಯಿಂದ 5 ಲಕ್ಷ ರೂಪಾಯಿಯವರೆಗೆ ಸುಲಿಗೆ ಮಾಡುತ್ತಾರೆ,” ಎಂದು ಮೃತನ ಸೋದರಸಂಬಂಧಿ ಆರೋಪಿಸಿದ್ದಾರೆ.

ಮಧ್ಯಾಹ್ನ ಹಸು ಮತ್ತು ವಾಹನವನ್ನು ಪೊಲೀಸ್ ಠಾಣೆಗೆ ತಂದು, ಬಾಲಕನ ವಿರುದ್ಧವೇ ದೂರು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಂಜೆಯ ವೇಳೆಗೆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಬಾಲಕ ಸಾರ್ವಜನಿಕವಾಗಿ ಅವಮಾನಕ್ಕೊಳಗಾಗಿದ್ದ” ಎಂದು ಸಬ್‌ಇನ್ಸ್‌ಪೆಕ್ಟರ್ ಸಂಜಯ್ ವಿಖೆ ತಿಳಿಸಿದ್ದಾರೆ.

ಮರುದಿನ ಮಧ್ಯಾಹ್ನ ಬಾಲಕ ತನ್ನ ಗುಡಿಸಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 107ರ ಅಡಿಯಲ್ಲಿ ಅಪ್ರಾಪ್ತ ವಯಸ್ಕನ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದಾರೆ. ಕೊಲ್ಹಾರ್, ತಿಸ್ಗಾಂವ್ ಮತ್ತು ಲೋನಿಯಲ್ಲಿ ಆರೋಪಿಗಳ ಮನೆಗಳು ಬಂದ್ ಆಗಿದೆ. ಅವರ ಬಂಧನಕ್ಕೆ ಶೋಧ ಮುಂದುವರಿದಿದೆ” ಎಂದು ಪಿಎಸ್‌ಐ ವಿಖೆ ತಿಳಿಸಿದ್ದಾರೆ.

ಅಕ್ಟೋಬರ್ 27ರ ರಾತ್ರಿ ಆರೋಪಿಗಳು ಕರೆ ಮಾಡಿ ವೀಡಿಯೊ ಅಳಿಸಿಹಾಕಲು ಹಾಗೂ ದೂರು ಹಿಂತೆಗೆದುಕೊಳ್ಳಲು 15,000 ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News