×
Ad

ನರ್ಸ್‌ನಂತೆ ನಟಿಸಿ ಬಾಣಂತಿಯ ಕೊಲೆಗೆ ಯತ್ನ: ಮಹಿಳೆ ಬಂಧನ

Update: 2023-08-06 08:03 IST

Representational Image | PC: Pixabay

ಪಟ್ಟಣಂತಿಟ್ಟ: ನರ್ಸ್‍ನಂತೆ ನಟಿಸಿದ 30 ವರ್ಷದ ಮಹಿಳೆಯೊಬ್ಬಳು, ಆಗಷ್ಟೇ ಹೆರಿಗೆಯಾಗಿದ್ದ ತನ್ನ ಸ್ನೇಹಿತನ ಪತ್ನಿಯನ್ನು ಖಾಸಗಿ ಆಸ್ಪತ್ರೆ ವಾರ್ಡ್‍ನಲ್ಲಿ ಕೊಲ್ಲಲು ಪ್ರಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಮಹಿಳೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಇಲ್ಲಿಗೆ ಸಮೀಪದ ಪರುಮಲ ಖಾಸಗಿ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದ್ದು, ಹೆರಿಗೆ ಬಳಿಕದ ಆರೈಕೆಗಾಗಿ ದಾಖಲಾಗಿದ್ದ ಸ್ನೇಹಾ (24) ಎಂಬ ಮಹಿಳೆಯನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎನ್ನಲಾಗಿದೆ. ಸ್ನೇಹಾ ಅವರ ಪತಿಯ ಸ್ನೇಹಿತೆ ಅನುಷಾ ಎಂಬಾಕೆಯನ್ನು ಆಸ್ಪತ್ರೆ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಔಷಧಿ ನೀಡುವ ನೆಪದಲ್ಲಿ ಅನುಷಾ, ವಿಟಮಿನ್ ಪೂರೈಕೆ ಮಾಡುತ್ತಿದ್ದ ನಳಿಕೆಗೆ ಗಾಳಿ ಚುಚ್ಚಿ ಬಾಣಂತಿಯ ಹತ್ಯೆಗೆ ಪ್ರಯತ್ನಿಸಿದ್ದಳು ಎಂದು ಆಪಾದಿಸಲಾಗಿದೆ.

ಆರೋಪಿ ಮಹಿಳೆಯ ಹೇಳಿಕೆ ದಾಖಲಿಸಿ, ಪೂರಕ ಪುರಾವೆಗಳನ್ನು ಸಂಗ್ರಹಿಸಿದ ಬಳಿಕ, ಆಕೆಯನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಗಸ್ಟ್ 4ರಂದು ಸ್ನೇಹಾ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆ ವಾರ್ಡ್‍ಗೆ ನರ್ಸ್ ದಿರಿಸಿನಲ್ಲಿ ಆಗಮಿಸಿ ಒಂದು ಚುಚ್ಚುಮದ್ದು ನೀಡಬೇಕಾಗಿದೆ ಎಂದು ನಂಬಿಸಿ ಈ ಕೃತ್ಯಕ್ಕೆ ಮುಂದಾಗಿದ್ದಳು ಎನ್ನಲಾಗಿದೆ.

ಖಾಲಿ ಸಿರಿಂಜ್‍ನಲ್ಲಿ ಎರಡು ಬಾರಿ ನಳಿಕೆಗೆ ಚುಚ್ಚುವ ಪ್ರಯತ್ನ ವಿಫಲವಾಗಿದೆ. ಮತ್ತೆ ಪ್ರಯತ್ನದಲ್ಲಿದ್ದಾಗ ಸ್ನೇಹಾ ಅವರ ತಾಯಿಗೆ ಅನುಮಾನ ಬಂದು ನರ್ಸಿಂಗ್ ಸಿಬ್ಬಂದಿಗೆ ಮಾಹಿತಿ ನೀಡಿದರು ಎಂದು ಪೊಲೀಸರು ವಿವರಿಸಿದ್ದಾರೆ. ಆರೋಪಿಯ ಮೊಬೈಲ್ ವಶಪಡಿಸಿಕೊಂಡು ತನಿಖೆ ನಡೆಸಿದಾಗ ಈ ಮಹಿಳೆ ಸ್ನೇಹಾ ಅವರ ಪತಿ ಅರುಣ್ ಅವರ ಸ್ನೇಹಿತೆ ಎಂದು ತಿಳಿದು ಬಂದಿದೆ. ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿದ್ದ ಅನುಷಾ, ನರ್ಸ್‍ನಂತೆ ವೇಷ ಬದಲಿಸಿಕೊಳ್ಳಲು ಸಿರಿಂಗ್, ಗ್ಲೌಸ್ ಹಾಗೂ ಕೋಟ್ ಖರೀದಿಸಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News