ಥಾಣೆ: ಕಿಕ್ಕಿರಿದು ತುಂಬಿದ್ದ ರೈಲಿನಿಂದ ಬಿದ್ದು ಆರು ಪ್ರಯಾಣಿಕರು ಸಾವು, ಏಳು ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ (PTI)
ಮುಂಬೈ: ಕಿಕ್ಕಿರಿದು ತುಂಬಿದ್ದ ಲೋಕಲ್ ರೈಲಿನಿಂದ ಕೆಳಕ್ಕೆ ಬಿದ್ದು ಆರು ಪ್ರಯಾಣಿಕರು ಮೃತಪಟ್ಟ ದುರಂತ ಘಟನೆ ಸೋಮವಾರ ಮಹಾರಾಷ್ಟ್ರದ ಥಾಣೆ ಸಮೀಪದ ದಿವಾದಲ್ಲಿ ಸಂಭವಿಸಿದ್ದು,ಏಳು ಜನರು ಗಾಯಗೊಂಡಿದ್ದಾರೆ.
ಬೆಳಿಗ್ಗೆ 9:30ರ ಸುಮಾರಿಗೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ರೈಲು ಕಸಾರಾದತ್ತ ಸಾಗುತ್ತಿದ್ದಾಗ ದಿವಾ ಮತ್ತು ಕೋಪರ್ ರೈಲು ನಿಲ್ದಾಣಗಳ ನಡುವೆ ಈ ದುರ್ಘಟನೆ ಸಂಭವಿಸಿದೆ.
ಭಾರೀ ಜನದಟ್ಟಣೆ ಇದ್ದರಿಂದ ಅನೇಕ ಪ್ರಯಾಣಿಕರು ರೈಲಿನ ಬಾಗಿಲುಗಳ ಬಳಿ ಫುಟ್‌ಬೋರ್ಡ್‌ಗಳ ಮೇಲೆ ನಿಂತಿದ್ದರು. ರೈಲು ಚಲಿಸುತ್ತಿರುವಾಗ ಹಲವು ಪ್ರಯಾಣಿಕರು ಕೆಳಗೆ ಬಿದ್ದಿದ್ದರು. ಈ ಪೈಕಿ ಆರು ಜನರು ಮೃತಪಟ್ಟಿದ್ದರೆ,ಇತರರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದರು. ಮೃತರು 30ರಿಂದ 35 ವರ್ಷ ವಯಸ್ಸಿನವರಾಗಿದ್ದಾರೆ.
ಇದು ಢಿಕ್ಕಿಯಲ್ಲ. ಲೋಕಲ್ ರೈಲಿನ ಪ್ರಯಾಣಿಕರ ಬ್ಯಾಗ್‌ಗಳು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಇನ್ನೊಂದು ರೈಲಿನ ಫುಟ್‌ಬೋರ್ಡ್‌ಗಳ ಮೇಲೆ ನಿಂತು ಪ್ರಯಾಣಿಸುತ್ತಿದ್ದವರ ಬ್ಯಾಗ್‌ಗಳೊಂದಿಗೆ ಸಿಕ್ಕಿ ಹಾಕಿಕೊಂಡಿದ್ದವು. ಓರ್ವ ಪ್ರಯಾಣಿಕರು ನೀಡಿರುವ ಮಾಹಿತಿಯಂತೆ ಇದು ದುರಂತಕ್ಕೆ ಶಂಕಿತ ಕಾರಣವಾಗಿದೆ. ಎರಡು ರೈಲುಗಳ ನಡುವಿನ ಅಂತರವು 1.5-2 ಮೀ.ಇರುತ್ತದೆ,ಆದರೆ ತಿರುವುಗಳಲ್ಲಿ ರೈಲುಗಳು ಕೊಂಚ ವಾಲುತ್ತವೆ ಮತ್ತು ಇದು ಘಟನೆಗೆ ಹೆಚ್ಚುವರಿ ಕಾರಣವಾಗಿರಬಹುದು ಎಂದು ಸೆಂಟ್ರಲ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವಪ್ನಿಲ್ ಧನರಾಜ ನೀಲಾ ತಿಳಿಸಿದರು.
ಘಟನೆಯು ಸಂಭವಿಸಿದಾಗ ಕೆಳಕ್ಕೆ ಬಿದ್ದಿದ್ದ ಪ್ರಯಾಣಿಕರು ಮುಂಬೈ-ಲಕ್ನೋ ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಪಯಾಣಿಸುತ್ತಿದ್ದರು ಎಂದು ಮಾಹಿತಿ ನೀಡಲಾಗಿತ್ತು. ಆದರೆ ಈ ಪ್ರಯಾಣಿಕರು ಮುಂಬೈ ಲೋಕಲ್ ರೈಲಿನಿಂದ ಬಿದ್ದಿದ್ದರು ಎಂದು ನೀಲಾ ಸ್ಪಷ್ಟಪಡಿಸಿದರು.
ಸುರಕ್ಷತಾ ಕ್ರಮಗಳಿಗೆ ಶರದ್ ಪವಾರ್ ಒತ್ತಾಯ:
ಘಟನೆಗೆ ಪ್ರತಿಕ್ರಿಯಿಸಿರುವ ಎನ್‌ಸಿಪಿ(ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಅವರು,ರೈಲುಗಳ ಬೋಗಿಗಳಿಗೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸುವಂತೆ ಆಗ್ರಹಿಸಿದ್ದಾರೆ.
ರೈಲ್ವೆಯು ವೇಳಾಪಟ್ಟಿಯನ್ನು ಸೂಕ್ತವಾಗಿ ರೂಪಿಸಬೇಕು ಮತ್ತು ಪ್ರಮುಖ ಮಾರ್ಗಗಳಲ್ಲಿ ಲೋಕಲ್ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಪ್ರಯಾಣಿಕರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ತಕ್ಷಣ ಜಾರಿಗೊಳಿಸಬೇಕು. ಇಂತಹ ಅಪಘಾತಗಳು ಆಗಾಗ್ಗೆ ಸಂಭವಿಸುವುದನ್ನು ತಡೆಯಲು ರೈಲುಗಳಿಗೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸುವ ನಿರ್ಧಾರವನ್ನು ತಕ್ಷಣ ಕಾರ್ಯಗತಗೊಳಿಸಬೇಕು ಎಂದು ಪವಾರ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಸೆಂಟ್ರಲ್ ರೈಲ್ವೆ ಮಾರ್ಗದಲ್ಲಿ ಪ್ರತಿದಿನ ಸರಾಸರಿ ಆರೇಳು ಪ್ರಯಾಣಿಕರು ಲೋಕಲ್ ರೈಲುಗಳಿಂದ ಬಿದ್ದು ಸಾಯುತ್ತಾರೆ. ಲೋಕಲ್ ರೈಲುಗಳಲ್ಲಿ ಹೆಚ್ಚಿನ ದಟ್ಟಣೆ ಅವಘಡಗಳಿಗೆ ಮುಖ್ಯ ಕಾರಣ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಂತಹ ಅವಘಾತಗಳ ಬಳಿಕ ಪ್ರಯಾಣಿಕರ ಸಾವಿಗೆ ಅವರನ್ನೇ ದೂರುವುದು ಸರಿಯಲ್ಲ. ಸೆಂಟ್ರಲ್ ರೈಲ್ವೆಯ ಆಡಳಿತವು ಈ ದುರಂತ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.
ಇದೊಂದು ಅತ್ಯಂತ ದುರದೃಷ್ಟಕರ ಘಟನೆ ಎಂದು ಹೇಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು,ಗಾಯಾಳುಗಳಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಕುರಿತು ರೈಲ್ವೆ ಇಲಾಖೆಯು ವಿಚಾರಣೆಯನ್ನು ಆರಂಭಿಸಿದೆ ಎಂದು ತಿಳಿಸಿದರು.
ಸ್ವಯಂಚಾಲಿತ ಬಾಗಿಲು ಅಳವಡಿಕೆಗೆ ನಿರ್ಧಾರ:
ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ರೈಲ್ವೆ ಸಚಿವಾಲಯವು ಮುಂಬೈ ಲೋಕಲ್ ರೈಲುಗಳಿಗಾಗಿ ತಯಾರಾಗುತ್ತಿರುವ ಬೋಗಿಗಳಿಗೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಲು ನಿರ್ಧರಿಸಿದೆ. ಸೇವೆಯಲ್ಲಿರುವ ಎಲ್ಲ ಬೋಗಿಗಳನ್ನು ಮರುವಿನ್ಯಾಸಗೊಳಿಸಲಾಗುವುದು ಎಂದು ಅದು ತಿಳಿಸಿದೆ.