ಉತ್ತರಾಖಂಡದಲ್ಲಿ ಭಾರೀ ಹಿಮಪಾತ : 40ಕ್ಕೂ ಅಧಿಕ ಕಾರ್ಮಿಕರು ಸಿಲುಕಿರುವ ಶಂಕೆ
ಸಾಂದರ್ಭಿಕ ಚಿತ್ರ | hindustantimes
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಪಾತ ಸಂಭವಿಸಿ 40ಕ್ಕೂ ಅಧಿಕ ಕಾರ್ಮಿಕರು ಹಿಮದಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
ಚಮೋಲಿ ಜಿಲ್ಲೆಯ ಮಾನಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಹಿಮದಡಿಯಲ್ಲಿ ಸಿಲುಕಿದವರು ಕಟ್ಟಡ ಕಾರ್ಮಿಕರು ಎಂದು ಹೇಳಲಾಗಿದೆ. ಸ್ಥಳದಲ್ಲಿ ಐಟಿಬಿಪಿ ಹಾಗೂ ಭಾರತೀಯ ಸೇನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಹಿಮಪಾತದಿಂದ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ತಲುಪಲು ಪ್ರಯತ್ನಿಸುತ್ತಿದೆ.
ಚಮೋಲಿ ಜಿಲ್ಲಾಧಿಕಾರಿ ಸಂದೀಪ್ ತಿವಾರಿ ಹಿಮದಡಿ 57 ಕಾರ್ಮಿಕರು ಸಿಲುಕಿರುವುದನ್ನು ಖಚಿತಪಡಿಸಿದ್ದಾರೆ.
ಪೊಲೀಸ್ ಇಲಾಖೆ ವಕ್ತಾರ ನಿಲೇಶ್ ಭರ್ನೆ ಮಾತನಾಡಿ, ʼಮಾನಾ ಗಡಿ ಪ್ರದೇಶದ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಶಿಬಿರದ ಬಳಿ ಹಿಮಪಾತ ಸಂಭವಿಸಿದೆ. ಇದರಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ 57 ಕಾರ್ಮಿಕರು ಸಿಲುಕಿದ್ದಾರೆ. ಈವರೆಗೆ 16 ಕಾರ್ಮಿಕರನ್ನು ರಕ್ಷಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದವರನ್ನು ಮಾನಾ ಬಳಿಯ ಸೇನಾ ಶಿಬಿರಕ್ಕೆ ಕಳುಹಿಸಲಾಗಿದೆʼ ಎಂದು ಹೇಳಿದ್ದಾರೆ.