ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ | ಈಡಿಯಿಂದ 110 ಕೋ. ರೂ. ಸ್ಥಗಿತ, 1200 ಕ್ರೆಡಿಟ್ ಕಾರ್ಡ್ ವಶ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ, ಆ. 14: ಸೈಪ್ರಸ್ ಮೂಲದ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ವೇದಿಕೆ ಪ್ಯಾರಿ ಮ್ಯಾಚ್ ಭಾರತದಲ್ಲಿ ನಡೆಸಿರುವ ವ್ಯವಹಾರಗಳಿಗೆ ಸಂಬಂಧಿಸಿ ನಡೆಸಲಾದ ಇತ್ತೀಚೆಗಿನ ದಾಳಿಯ ಹಿನ್ನೆಲೆಯಲ್ಲಿ ನಕಲಿ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 110 ಕೋಟಿ ರೂಪಾಯಿ ಸ್ಥಗಿತಗೊಳಿಸಲಾಗಿದೆ ಹಾಗೂ 1,200 ನಕಲಿ ಕ್ರೆಡಿಟ್ ಕಾರ್ಡ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ತಿಳಿಸಿದೆ.
ಪ್ಯಾರಿಮ್ಯಾಚ್ ಅಪ್ಲಿಕೇಶನ್ ಕ್ರೀಡಾ ಪಂದ್ಯಾವಳಿಗಳ ಪ್ರಾಯೋಜಕತ್ವ ಹಾಗೂ ಸೆಲೆಬ್ರಿಟಿಗಳೊಂದಿಗೆ ಪಾಲುದಾರಿಕೆ ಸೇರಿದಂತೆ ಆಕ್ರಮಣಕಾರಿ ಮಾರುಕಟ್ಟೆ ಮೂಲಕ ದೇಶದಲ್ಲಿ ಜನಪ್ರಿಯತೆ ಗಳಿಸಿತ್ತು ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಈ ಅಪ್ಲಿಕೇಷನ್ ಹೆಚ್ಚಿನ ಆದಾಯದ ಆಮಿಷ ತೋರಿಸಿ ಹೂಡಿಕೆದಾರರನ್ನು ವಂಚಿಸಿದೆ ಹಾಗೂ ಒಂದು ವರ್ಷದಲ್ಲಿ 3,000 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದೆ ಎಂದು ಅದು ಆರೋಪಿಸಿದೆ.
‘‘ಪ್ಯಾರಿಮ್ಯಾಚ್ ಸೋರ್ಟ್ಸ್ ಹಾಗೂ ಪ್ಯಾರಿಮ್ಯಾಚ್ ನ್ಯೂಸ್ ಹೆಸರಿನಲ್ಲಿ ಬದಲಿ ಜಾಹೀರಾತುಗಳನ್ನು ಪ್ರಕಟಿಸಲು ಅದು ಭಾರತೀಯ ಸಂಸ್ಥೆಗಳನ್ನು ಕೂಡ ಸ್ಥಾಪಿಸಿತ್ತು. ಈ ಕಂಪೆನಿಗಳಿಗೆ ವಿದೇಶದಿಂದ ದೇಶಕ್ಕೆ ಬಂದಿರುವ ಹಣದಿಂದ ಪಾವತಿ ಮಾಡಲಾಗಿತ್ತು’’ ಎಂದು ಜಾರಿ ನಿರ್ದೇಶನಾಲಯ (ಈಡಿ) ಹೇಳಿಕೆಯಲ್ಲಿ ತಿಳಿಸಿದೆ.
ಪ್ಯಾರಿ ಮ್ಯಾಚ್ ವ್ಯವಹಾರದ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಾದ ಪ್ರಕರಣದ ಭಾಗವಾಗಿ ಜಾರಿ ನಿರ್ದೇಶನಾಲಯ ಆಗಸ್ಟ್ 12ರಂದು ಮುಂಬೈ, ನೋಯ್ಡಾ, ಜೈಪುರ, ಸೂರತ್, ಮದುರೈ, ಕಾನ್ಪುರ ಹಾಗೂ ಹೈದರಾಬಾದ್ ನ 17 ಸ್ಥಳಗಳಲ್ಲಿ ದಾಳಿ ನಡೆಸಿತ್ತು.
ಆನ್‌ಲೈನ್ ಬೆಟ್ಟಿಂಗ್ ಮೂಲಕ ಬಳಕೆದಾರರನ್ನು ವಂಚಿಸಿದ ಪ್ಯಾರಿಮ್ಯಾಚ್.ಕಾಮ್ ವಿರುದ್ಧ ಮುಂಬೈ ಪೊಲೀಸರ ಸೈಬರ್ ಪೊಲೀಸ್ ಠಾಣೆ ದಾಖಲಿಸಿದ ಐಫ್‌ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯದ ಈ ಪ್ರಕರಣ ದಾಖಲಿಸಿದೆ