ಭಾರತ್ ಬಂದ್ | ಬಿಹಾರ, ಪಶ್ಚಿಮ ಬಂಗಾಳದಲ್ಲಿ ರೈಲು ತಡೆ, ಸಾರ್ವಜನಿಕ ಸಾರಿಗೆಯಲ್ಲಿ ಅಡಚಣೆ
Photo credit: PTI
ಹೊಸದಿಲ್ಲಿ: ಕಾರ್ಮಿಕ ಹಕ್ಕುಗಳ ಪರವಾಗಿ, ಕೇಂದ್ರದ ಕಾರ್ಮಿಕ ನೀತಿಯ ವಿರುದ್ಧ 10 ಪ್ರಮುಖ ಕಾರ್ಮಿಕ ಸಂಘಟನೆಗಳು ನೀಡಿದ್ದ 'ಭಾರತ್ ಬಂದ್' ಕರೆ ಬುಧವಾರ (ಜುಲೈ 9) ದೇಶದ ಹಲವಾರು ರಾಜ್ಯಗಳಲ್ಲಿ ಗಂಭೀರ ಪರಿಣಾಮಗಳನ್ನು ಉಂಟುಮಾಡಿದೆ. ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಕೇರಳ ಮತ್ತು ಇತರ ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆ, ಬ್ಯಾಂಕಿಂಗ್, ಕೈಗಾರಿಕಾ ಕ್ಷೇತ್ರಗಳಲ್ಲಿ ಮುಷ್ಕರದಿಂದ ಅಡಚಣೆ ಉಂಟಾಯಿತು.
ಕೇಂದ್ರ ಸರ್ಕಾರವು ಪರಿಚಯಿಸಿದ ಕಾರ್ಮಿಕ ಸುಧಾರಣೆಗಳು ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಲು ಬಂದ್ ಗೆ ಕರೆ ನೀಡಲಾಗಿತ್ತು. ಸರ್ಕಾರದ ನೀತಿಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎಂದು ಕಾರ್ಮಿಕರ ಒಕ್ಕೂಟಗಳು ಆರೋಪಿಸಿವೆ. ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಕಾರ್ಮಿಕ ಸಂಘಟನೆಗಳು 17 ಅಂಶಗಳ ಬೇಡಿಕೆಗಳನ್ನು ಮುಂದಿಟ್ಟಿವೆ.
ಬಿಹಾರದ ಜೆಹಾನಾಬಾದ್ ರೈಲು ನಿಲ್ದಾಣದಲ್ಲಿ ರಾಷ್ಟ್ರೀಯ ಜನತಾದಳದ ವಿದ್ಯಾರ್ಥಿ ಘಟಕದ ಸದಸ್ಯರು ಹಳಿಗಳನ್ನು ತಡೆದು ರೈಲು ಸಂಚಾರಕ್ಕೆ ಅಡಚಣೆ ಉಂಟು ಮಾಡಿದರು. ಪಶ್ಚಿಮ ಬಂಗಾಳದ ಜಾದವ್ ಪುರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಎಡಪಂಥೀಯ ಸಂಘಟನೆಗಳ ಸದಸ್ಯರು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.
ಪಶ್ಚಿಮ ಬಂಗಾಳ ರಾಜ್ಯದ ಉತ್ತರ ಭಾಗದಲ್ಲಿ ಬಸ್ ಚಾಲಕರು ಹಿಂಸಾತ್ಮಕ ಪರಿಸ್ಥಿತಿಯಿಂದ ರಕ್ಷಿಸಿಕೊಳ್ಳಲು ಕರ್ತವ್ಯದ ವೇಳೆ ಹೆಲ್ಮೆಟ್ ಧರಿಸುತ್ತಿರುವ ದೃಶ್ಯ ಕಂಡುಬಂದಿದೆ ಎಂದು ANI ವರದಿ ಮಾಡಿದೆ. ಪೊಲೀಸ್ ಪಡೆಗಳನ್ನು ಬಸ್ ನಿಲ್ದಾಣಗಳಲ್ಲಿ ನಿಯೋಜಿಸಲಾಗಿರುವ ದೃಶ್ಯ ಕಂಡು ಬಂತು.
ಒಡಿಶಾ, ಕೇರಳದಲ್ಲಿ ವ್ಯಾಪಾರದ ಮೇಲೆ ಬಂದ್ ಪರಿಣಾಮ ಬೀರಿತು.ಒಡಿಶಾದ ಭುವನೇಶ್ವರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಯಲಾಯಿತು. ಕೇರಳದ ಕೊಟ್ಟಾಯಂನಲ್ಲಿ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದರು. ಮಾಲ್‌ಗಳು, ಖಾಸಗಿ ವ್ಯಾಪಾರ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು.
ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲವು ಭಾಗಗಳಲ್ಲಿ ಸಾರ್ವಜನಿಕ ಸಾರಿಗೆ ಸರಾಗವಾಗಿತ್ತು.
ದೇಶದಾದ್ಯಂತ INTUC, AITUC, HMS, CITU ಸೇರಿದಂತೆ 10ಕ್ಕೂ ಹೆಚ್ಚು ಕಾರ್ಮಿಕ ಒಕ್ಕೂಟಗಳು ಮುಷ್ಕರದಲ್ಲಿ ಭಾಗವಹಿಸಿದವು. ಸರ್ಕಾರದ ನಿಷ್ಕ್ರಿಯತೆಯನ್ನು ಸಂಘಟನೆಗಳು ಖಂಡಿಸಿದವು.