ಬಿಹಾರ | ನವೆಂಬರ್ 18ರಂದು ಪ್ರಮಾಣವಚನ ಸ್ವೀಕರಿಸುವುದಾಗಿ ಘೋಷಿಸಿದ ‘ಮಹಾಘಟಬಂಧನ್’ ಸಿಎಂ ಅಭ್ಯರ್ಥಿ !
ತೇಜಸ್ವಿ ಯಾದವ್ |Photo Credit : PTI
ಪಾಟ್ನಾ,ನ.2: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಉಳಿದಿರುವಂತೆಯೇ, ಪ್ರತಿಪಕ್ಷ ಒಕ್ಕೂಟ ‘ಮಹಾಘಟಬಂಧನ’ ದ ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ತಮ್ಮ ಮೈತ್ರಿಕೂಟವು ಭರ್ಜರಿ ಜಯಗಳಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮತ್ತು ಅವರು ಪ್ರಮಾಣವಚನ ಸ್ವೀಕರಿಸುವ ದಿನಾಂಕವನ್ನು ಕೂಡ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಹಾರದಲ್ಲಿ ಪ್ರತಿಪಕ್ಷ ಮೈತ್ರಿಕೂಟವು ಖಂಡಿತವಾಗಿಯೂ ಮುಂದಿನ ಸರಕಾರವನ್ನು ರಚಿಸಲಿದೆ. ನವೆಂಬರ್ 14ರಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾಗಲಿವೆ ಮತ್ತು ನವೆಂಬರ್ 18ರಂದು ಪ್ರಮಾಣವಚನ ಸ್ವೀಕಾರ ನಡೆಯಲಿದೆ ’’ಎಂದು ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ಅವರ ಜನಸೂರಜ್ ಪಕ್ಷದ ಬೆಂಬಲಿಗ ದುಲಾರ್ ಚಂದ್ ಯಾದವ್‌ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೊಕಾಮಾದ ಮಾಜಿ ಶಾಸಕರ ಹಾಗೂ ಜೆಡಿಯು ಅಭ್ಯರ್ಥಿ ಆನಂತ್ ಸಿಂಗ್ ಬಂಧನದ ಬೆನ್ನಲ್ಲೇ ತೇಜಸ್ವಿಯಾದವ್ ಅವರು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೇರಿದಲ್ಲಿ ಕೆಲವೇ ವಾರಗಳೊಳಗೆ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲಾ ಕ್ರಿಮಿನಲ್‌ಗಳನ್ನು ಜೈಲಿಗಟ್ಟಲಿದೆ ಎಂದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋದ ವರದಿಗಳ ಪ್ರಕಾರ ಅಪರಾಧ ಪ್ರಮಾಣದಲ್ಲಿ ಬಿಹಾರವು ದೇಶದ ರಾಜ್ಯಗಳಲ್ಲೇ ಅಗ್ರಸ್ಥಾನದಲ್ಲಿದೆ ಎಂದರು. ರಾಜ್ಯದ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಗಮನಹರಿಸುವಂತೆ ತೇಜಸ್ವಿ ಅವರು ಚುನಾವಣಾ ಪ್ರಚಾರಕ್ಕಾಗಿ ರವಿವಾರ ಬಿಹಾರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.
‘‘ಬಿಹಾರದಲ್ಲಿ ಹೇಯ ಅಪರಾಧ ಕೃತ್ಯಗಳು ನಡೆಯದೆ ದಿನಗಳು ಕಳೆಯುವುದು ಕಷ್ಟವಾಗಿದೆ. ಆದರೆ ಮಹಾಘಟಬಂಧನ (ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟದ ಹೆಸರು)ವು ಸರಕಾರ ರಚಿಸಿದಲ್ಲಿ ಇದು ಬದಲಾಗಲಿದೆ’’ ಎಂದವರು ಹೇಳಿದರು.