ಬಿಹಾರ | ಅರಾರಿಯಾದಲ್ಲಿ ಸೇತುವೆ ಕುಸಿತ : ಸಂಚಾರ ಸ್ಥಗಿತ
Photo: timesofindia
ಅರಾರಿಯಾ, ನ. 3: ಬಿಹಾರದ ಅರಾರಿಯಾ ಜಿಲ್ಲೆಯಲ್ಲಿರುವ ಸಣ್ಣ ಸೇತುವೆಯೊಂದರ ಕಂಬ ಸೋಮವಾರ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೋರ್ಬ್ಸ್‌ಗಂಜ್‌ನಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ‘‘ನಾನು ಈ ಘಟನೆ ಕುರಿತಂತೆ ವಿವರವಾದ ವರದಿ ಕೋರಿದ್ದೇನೆ’’ ಎಂದು ಜಿಲ್ಲಾ ದಂಡಾಧಿಕಾರಿ (ಡಿಎಂ) ಅನಿಲ್ ಕುಮಾರ್ ಹೇಳಿದ್ದಾರೆ.
ಫೋರ್ಬ್‌ಗಂಜ್ ಉಪ ವಿಭಾಗದ ವ್ಯಾಪ್ತಿಯ ಕೆವ್ಲಾಶಿ ಗ್ರಾಮದಲ್ಲಿರುವ ಪರ್ಮನ್ ನದಿ ಮೇಲಿನ ಸೇತುವೆಯ ಮಧ್ಯದ ಕಂಬ ಸೋಮವಾರ ಕುಸಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
2019ರಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಈ ಸೇತುವೆಯನ್ನು ರಾಜ್ಯ ಸರಕಾರದ ಗ್ರಾಮಾಂತರ ಕಾಮಗಾರಿ ಇಲಾಖೆ ನಿರ್ವಹಿಸುತ್ತಿತ್ತು. ಈ ಸೇತುವೆ ಪಟೆಂಗಾ ಗ್ರಾಮ ಹಾಗೂ ಇತರ ಸಮೀಪದ ಸ್ಥಳಗಳನ್ನು ಫೋರ್ಬ್‌ಗಂಜ್‌ನೊಂದಿಗೆ ಜೋಡಿಸುತ್ತಿತ್ತು.
ಸೇತುವೆ ಮೇಲೆ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಗ್ರಾಮಾಂತರ ಕಾಮಗಾರಿ ಇಲಾಖೆಯ ತಾಂತ್ರಿಕ ತಜ್ಞರ ತಂಡವನ್ನು ಘಟನೆಯ ತನಿಖೆ ನಡೆಸಲು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳದೆ ವರ್ಷ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಣ್ಣ ಹಾಗೂ ದೊಡ್ಡ ಸೇತುವೆಗಳು ಸೇರಿ ಒಟ್ಟು 12 ಸೇತುವೆಗಳು ಕುಸಿದಿದ್ದವು.