×
Ad

ಬಿಹಾರ ವಿಧಾನಸಭಾ ಚುನಾವಣೆ : ಇಂದು ವೇಳಾಪಟ್ಟಿ ಪ್ರಕಟಿಸಲಿರುವ ಚುನಾವಣಾ ಆಯೋಗ

Update: 2025-10-06 10:52 IST

ಹೊಸದಿಲ್ಲಿ,ಅ.6: ಚುನಾವಣಾ ಆಯೋಗ ಸೋಮವಾರ ಬಹುಚರ್ಚಿತ ಬಿಹಾರ ವಿಧಾನಸಭಾ ಚುನಾವಣೆಗೆ ಮುಹೂರ್ತವನ್ನು ನಿಗದಿಗೊಳಿಸಿದೆ. ಚುನಾವಣೆಗಳು ನ.6 ಮತ್ತು ನ.11ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನ.14ರಂದು ಫಲಿತಾಂಶಗಳು ಹೊರಬೀಳಲಿವೆ ಎಂದು ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್‌ ಕುಮಾರ್‌ ಅವರು ಪ್ರಕಟಿಸಿದರು.

ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ಮತದಾರರ ಪಟ್ಟಿಗಳನ್ನು ಶುದ್ಧೀಕರಿಸಿದೆ. ಕರಡು ಪಟ್ಟಿಗಳು ಪ್ರಕಟಗೊಂಡ ಬಳಿಕ ಆಕ್ಷೇಪಗಳು ಮತ್ತು ಹಕ್ಕುಗಳನ್ನು ಸಲ್ಲಿಸಲು ಎಲ್ಲ ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಸೆ.30ರಂದು ಅಂತಿಮ ಕರಡನ್ನು ಪ್ರಕಟಿಸಲಾಗಿದೆ ಎಂದು ಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಐದು ವರ್ಷಗಳ ಬಳಿಕ ಬಿಹಾರದ ಪುಣ್ಯಭೂಮಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಮತದಾರರ ಪಟ್ಟಿಗಳ ತಯಾರಿಕೆ ಮತ್ತು ಚುನಾವಣೆಗಳನ್ನು ನಡೆಸುವ ಎರಡು ಹಂತಗಳಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತದೆ ಎಂದರು.

ಬಿಹಾರ ವಿಧಾನಸಭೆಯ ಅಧಿಕಾರವು ನ.22ರಂದು ಅಂತ್ಯಗೊಳ್ಳಲಿದೆ. ಯಾವುದೇ ಹಿಂಸಾಚಾರದತ್ತ ಶೂನ್ಯ ಸಹಿಷ್ಣುತೆ ಕಾಯ್ದುಕೊಳ್ಳುವಂತೆ ಹಾಗೂ ಮತದಾರರಿಗೆ ಅಥವಾ ಅಭ್ಯರ್ಥಿಗಳಿಗೆ ಬೆದರಿಕೆಗಳಿಗೆ ಅವಕಾಶವಿಲ್ಲ ಎಂದು ಆಡಳಿತಕ್ಕೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಕುಮಾರ್‌ ತಿಳಿಸಿದರು.

ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯಾದ್ಯಂತ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಪ್ರಚಾರದ ಕಾವು ಹೆಚ್ಚುತ್ತಿರುವ ಜೊತೆಗೆ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿಯೂ ತೊಡಗಿಕೊಂಡಿವೆ.

ಬಿಹಾರ ಚುನಾವಣಾ ರಂಗದಲ್ಲಿ ಮುಖ್ಯಮಂತ್ರಿ ನಿತೀಶ ಕುಮಾರ್‌ ನೇತೃತ್ವದ ಆಡಳಿತಾರೂಢ ಎನ್‌ಡಿಎ ಮತ್ತು ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ನಡುವೆ ನೇರ ಹಣಾಹಣಿಯನ್ನು ನಿರೀಕ್ಷಿಸಲಾಗಿದೆ.

ಉಪಚುನಾವಣೆ

ಜಮ್ಮುಕಾಶ್ಮೀರ, ರಾಜಸ್ಥಾನ, ಜಾರ್ಖಂಡ್, ತೆಲಂಗಾಣ, ಪಂಜಾಬ್, ಮಿರೆರಮ್ ಮತ್ತು ಒಡಿಶಾದ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ನ.8ರಂದು ಉಪಚುನಾವಣೆಗಳು ನಡೆಯಲಿದ್ದು, ನ.14ರಂದು ಮತ ಎಣಿಕೆ ನಡೆಯಲಿದೆ ಎಂದೂ ಜ್ಞಾನೇಶ್‌ ಕುಮಾರ್‌ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಬಿಹಾರ ಚುನಾವಣೆಯ ಮುಖ್ಯಾಂಶಗಳು

► ಒಟ್ಟು ವಿಧಾನಸಭಾ ಕ್ಷೇತ್ರಗಳು 243 : ಎರಡು ಎಸ್‌ಟಿಗಳಿಗೆ ಮತ್ತು 38 ಎಸ್‌ಸಿಗಳಿಗೆ ಮೀಸಲು

► ಒಟ್ಟು ಮತದಾರರು 7.42 ಕೋಟಿ : ಪುರುಷರು 3.92 ಕೋಟಿ. ಮಹಿಳೆಯರು 3.5 ಕೋಟಿ.ಮೊದಲ ಬಾರಿಯ ಮತದಾರರು ಸುಮಾರು 14 ಲಕ್ಷ

► ಒಟ್ಟು ಮತಗಟ್ಟೆಗಳ ಸಂಖ್ಯೆ 90,712(ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ 1,200 ಮತದಾರರು)

► ನ.6ರಂದು 121 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಅ.10ರಂದು ಅಧಿಸೂಚನೆ ಪ್ರಕಟ

► ನ.11ರಂದು 122 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ, ಅ.13ರಂದು ಅಧಿಸೂಚನೆ ಪ್ರಕಟ

► ನಾಮಪತ್ರ ಸಲ್ಲಿಸಲು ಅಂತಿಮ ದಿನಾಂಕ : ಮೊದಲ ಹಂತಕ್ಕೆ ಅ.17, ಎರಡನೇ ಹಂತಕ್ಕೆ ಅ.20

► ನಾಮಪತ್ರಗಳ ಪರಿಶೀಲನೆ: ಮೊದಲ ಹಂತ ಅ.18, ಎರಡನೇ ಹಂತ ಅ.21

► ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಅಂತಿಮ ದಿನಾಂಕ : ಮೊದಲ ಹಂತ ಅ.20, ಎರಡನೇ ಹಂತ ಅ.23

► ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಣೆ:ನ.14

► ವಿಧಾನಸಭೆಯಲ್ಲಿ ಪ್ರಸ್ತುತ ಬಲಾಬಲ

ಎನ್‌ಡಿಎ ಒಟ್ಟು 131 ಸ್ಥಾನಗಳು : ಬಿಜೆಪಿ 80,ಜೆಡಿಯು 45, ಎಚ್‌ಎಎಂ(ಎಸ್) 4 ಮತ್ತು ಇಬ್ಬರು ಪಕ್ಷೇತರರು

ಮಹಾಘಟಬಂಧನ್ ಒಟ್ಟು 111 ಸ್ಥಾನಗಳು : ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ(ಎಂಎಲ್) 11,ಸಿಪಿಎಂ 2,ಸಿಪಿಐ 2

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News