×
Ad

ಬಿಹಾರ ವಿಧಾನಸಭಾ ಚುನಾವಣೆ | ಮಹಾಘಟಬಂಧನ್ ಪ್ರಣಾಳಿಕೆ ಬಿಡುಗಡೆ : ಪ್ರತಿ ಕುಟುಂಬಕ್ಕೆ ಸರಕಾರಿ ಉದ್ಯೋಗ, ಮಹಿಳೆಯರಿಗೆ ಮಾಸಿಕ ತಲಾ 2,500 ರೂ. ಧನಸಹಾಯ

Update: 2025-10-28 20:07 IST

Photo/ANI

ಪಾಟ್ನಾ,ಅ.28: ಬಿಹಾರದ ಮಹಾಮೈತ್ರಿಕೂಟವು (ಮಹಾಘಟಬಂಧನ) ರಾಜ್ಯ ವಿಧಾನಸಭಾ ಚುನಾವಣೆಗಾಗಿ ತನ್ನ ಪ್ರಣಾಳಿಕೆ ‘ತೇಜಸ್ವಿ ಪ್ರಣ್(ತೇಜಸ್ವಿ ಪ್ರತಿಜ್ಞೆ)’ ಅನ್ನು ಮಂಗಳವಾರ ಬಿಡುಗಡೆಗೊಳಿಸಿದೆ. ಪ್ರತಿ ಕುಟುಂಬಕ್ಕೆ ಒಂದು ಸರಕಾರಿ ಉದ್ಯೋಗ, ಮಹಿಳೆಯರಿಗೆ ಮಾಸಿಕ 2,500 ರೂ. ಮತ್ತು ಪ್ರತಿ ಕುಟುಂಬಕ್ಕೆ ಮಾಸಿಕ 200 ಯುನಿಟ್‌ಗಳ ಉಚಿತ ವಿದ್ಯುತ್ ಸೇರಿದಂತೆ ಹಲವಾರು ಜನಪ್ರಿಯ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಇಂಡಿಯಾ ಮೈತ್ರಿಕೂಟದ ಸಂಕಲ್ಪ ಪತ್ರ 2025 ಆಗಿ ಅನಾವರಣಗೊಂಡ ಪ್ರಣಾಳಿಕೆಯು ‘ಸಂಪೂರ್ಣ ಬಿಹಾರ ಕಾ,ಸಂಪೂರ್ಣ ಪರಿವರ್ತನ್-ತೇಜಸ್ವಿ ಪ್ರತಿಜ್ಞಾ,ತೇಜಸ್ವಿ ಪ್ರಣ್’ ಘೋಷಣೆಯನ್ನು ಒಳಗೊಂಡಿದೆ.

ಪ್ರಣಾಳಿಕೆಯು ಉದ್ಯೋಗಾವಕಾಶ, ಜನಕಲ್ಯಾಣ ಮತ್ತು ಆಡಳಿತ ಸುಧಾರಣೆಗಳನ್ನು ಕೇಂದ್ರೀಕರಿಸಿ ವ್ಯಾಪಕ ಕಾರ್ಯಸೂಚಿಯನ್ನು ಒಳಗೊಂಡಿದೆ.

ಪ್ರಣಾಳಿಕೆಯ ಹೊದಿಕೆಯು ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ತೇಜಸ್ವಿ ಯಾದವರ ಚಿತ್ರವನ್ನು ಪ್ರಮುಖವಾಗಿ ಹೊಂದಿದೆ.

ಪ್ರಮುಖ ಭರವಸೆಗಳು

► ಪ್ರತಿ ಕುಟುಂಬಕ್ಕೆ ಒಂದು ಸರಕಾರಿ ಉದ್ಯೋಗವನ್ನು ಒದಗಿಸಲು ಸರಕಾರ ರಚನೆಯಾದ 20 ದಿನಗಳಲ್ಲಿ ಕಾಯ್ದೆ ಅಂಗೀಕಾರ. ಅಧಿಕಾರ ವಹಿಸಿಕೊಂಡ 20 ತಿಂಗಳುಗಳಲ್ಲಿ ರಾಜ್ಯಾದ್ಯಂತ ಉದ್ಯೋಗ ಖಾತರಿ ಯೋಜನೆ ಆರಂಭ

► ಎಲ್ಲ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಕಾಯಂ. ಎಲ್ಲ ಜೀವಿಕಾ(ಸ್ವಸಹಾಯ ಗುಂಪು) ಮಹಿಳೆಯರಿಗೆ ಮಾಸಿಕ 30,000 ರೂ.ವೇತನದೊಂದಿಗೆ ಕಾಯಂ ಸರಕಾರಿ ಉದ್ಯೋಗ

► ಪ್ರತಿ ಕುಟುಂಬಕ್ಕೆ ಮಾಸಿಕ 200 ಯುನಿಟ್ ವಿದ್ಯುತ್ ಉಚಿತ. ಬಡ ಕುಟುಂಬಗಳಿಗೆ 500 ರೂ.ಗಳಲ್ಲಿ ಅಡಿಗೆ ಅನಿಲ ಸಿಲಿಂಡರ್

► ದೋಷಯುಕ್ತ ಸ್ಮಾರ್ಟ್ ಮೀಟರ್‌ಗಳಿಂದ ಉಂಟಾಗಿರುವ ಸಮಸ್ಯೆಗಳ ಪರಿಹಾರ ಮತ್ತು ಎಲ್ಲ ಸಂಬಂಧಿತ ಪ್ರಕರಣಗಳ ಹಿಂದೆಗೆತ

► ‘ಮಾಯಿ-ಬೆಹಿನ್ ಮಾನ್ ಯೋಜನಾ’ದಡಿ ಡಿ.1ರಿಂದ ಮಾಸಿಕ 2,500 ರೂ.ಗಳಂತೆ ಮುಂದಿನ ಐದು ವರ್ಷಗಳಲ್ಲಿ 30,000 ರೂ.ಗಳ ಆರ್ಥಿಕ ನೆರವು

► ಪ್ರತಿ ವ್ಯಕ್ತಿಗೆ 25 ಲಕ್ಷ ರೂ.ವರೆಗೆ ಉಚಿತ ಆರೋಗ್ಯ ವಿಮೆ

► ವಿಧವೆಯರು ಮತ್ತು ಹಿರಿಯ ನಾಗರಿಕರಿಗೆ ವಾರ್ಷಿಕ 200 ರೂ.ಗಳ ಹೆಚ್ಚಳದೊಂದಿಗೆ 1,500 ರೂ.ಗಳ ಮಾಸಿಕ ಪಿಂಚಣಿ. ಅಂಗವಿಕಲ ವ್ಯಕ್ತಿಗಳಿಗೆ ಮಾಸಿಕ 3,000ರೂ.

► ಹಳೆಯ ಪಿಂಚಣಿ ಯೋಜನೆ (ಒಪಿಎಸ್)ಮರು ಜಾರಿ

► ಪ್ರತಿ ಉಪವಿಭಾಗದಲ್ಲಿ ಮಹಿಳಾ ಕಾಲೇಜುಗಳ ಆರಂಭ

► ಪ್ರಸ್ತುತ ಕಾಲೇಜುಗಳಿಲ್ಲದಿರುವ 136 ಬ್ಲಾಕ್‌ಗಳಲ್ಲಿ ಹೊಸ ಪದವಿ ಕಾಲೇಜುಗಳ ಸ್ಥಾಪನೆ

► ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶುಲ್ಕ ಮನ್ನಾ ಮತ್ತು ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಉಚಿತ ಪ್ರಯಾಣದ ವ್ಯವಸ್ಥೆ

► ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಸ್ಥಳೀಯ ಮಾರುಕಟ್ಟೆಗಳು ಮತ್ತು ಮಂಡಿಗಳ ಪುನಃಶ್ಚೇತನ

► ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗಾಗಿ ಕಲ್ಯಾಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ

► ಕೇಂದ್ರವು ಹೇರುವ ಯಾವುದೇ ಅಸಾಂವಿಧಾನಿಕ ಕಾನೂನನ್ನು ಪ್ರಬಲವಾಗಿ ಪ್ರತಿರೋಧಿಸಲಾಗುವುದು ಮತ್ತು ಎಲ್ಲ ಅಲ್ಪಸಂಖ್ಯಾತ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲಾಗುವುದು

► ವಕ್ಫ್ ತಿದ್ದುಪಡಿ ಮಸೂದೆಗೆ ತಡೆ

► ಬೋಧಗಯಾದಲ್ಲಿರುವ ಬೌದ್ಧ ದೇವಸ್ಥಾನಗಳ ಆಡಳಿತ ಬೌದ್ಧ ಸಮುದಾಯದ ಜನರಿಗೆ ಹಸ್ತಾಂತರ

► ಮಾಜಿ ಯೋಧರಿಗಾಗಿ ಕಲ್ಯಾಣ ನಿಗಮ ಸ್ಥಾಪನೆ

► ಪಾನ ನಿಷೇಧ ಕಾಯ್ದೆಯ ಪುನರ್‌ಪರಿಶೀಲನೆ. ಸೇಂದಿಯ ಮೇಲಿನ ನಿಷೇಧ ಹಿಂದಕ್ಕೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News