×
Ad

ಮತ ಎಣಿಕೆ ವೇಳೆ ಅಕ್ರಮಗಳು ನಡೆದರೆ ಬಿಹಾರದಲ್ಲಿ ನೇಪಾಳ ಮಾದರಿ ಪ್ರತಿಭಟನೆಯ ಎಚ್ಚರಿಕೆ : ಶಾಲೆಗಳಿಗೆ ರಜೆ

Update: 2025-11-14 07:24 IST

ಸಾಂದರ್ಭಿಕ ಚಿತ್ರ PC | PTi

ಪಾಟ್ನಾ : ಇಡೀ ದೇಶ ಬಿಹಾರ ಚುನಾವಣೆಯ ಮತ ಎಣಿಕೆಯನ್ನು ಕುತೂಹಲದಿಂದ ಎದುರು ನೋಡುತ್ತಿದ್ದರೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.

"ಮತ ಎಣಿಕೆ ವೇಳೆ ಯಾವುದೇ ಅಕ್ರಮಗಳು ನಡೆದರೆ ನೇಪಾಳ ಮಾದರಿಯ ಪ್ರತಿಭಟನೆ ಭುಗಿಲೇಳಲಿದೆ" ಎಂದು ಆರ್‌ಜೆಡಿ ಎಂಎಲ್‍ಸಿ ಹಾಗೂ ಲಾಲೂಪ್ರಸಾದ್ ಆಪ್ತ ಸುನೀಲ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಆರ್‌ಜೆಡಿ ಶಾಸಕರ ಕಟ್ಟುನಿಟ್ಟಿನ ಎಚ್ಚರಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. "ಅಧಿಕಾರಿಗಳು ಎಣಿಕೆ ವಂಚನೆಯಲ್ಲಿ ತೊಡಗಿದರೆ ಬಿಹಾರದ ಬೀದಿಗಳು, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ನಡೆದ ಪ್ರತಿಭಟನೆಗಳನ್ನು ನೋಡಬೇಕಾಗುತ್ತದೆ ಹಾಗೂ ಒಟ್ಟಾರೆ ಪರಿಸ್ಥಿತಿ ಸರ್ಕಾರದ ನಿಯಂತ್ರಣವನ್ನು ಮೀರುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದೇನೆ" ಎಂದು ಅವರು ಹೇಳಿಕೆ ನೀಡಿದ್ದಾರೆ. ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಏಕೆಂದರೆ ಈ ಬಾರಿ ಜನತೆ ಹೆಚ್ಚು ಜಾಗರೂಕರಾಗಿದ್ದು, ಸೂಕ್ತವಾಗಿ ಪ್ರತಿಕ್ರಿಯಸಲಿದ್ದಾರೆ ಎಂದು ವಿವರಿಸಿದ್ದಾರೆ.

ಹಲವು ಜಿಲ್ಲೆಗಳಲ್ಲಿ ಆರ್‌ಜೆಡಿ ಶಾಸಕರ ಈ ಹೇಳಿಕೆಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಗಳು, ಸಂಭಾವ್ಯ ಕಾನೂನು ಮತ್ತು ಸುವ್ಯವಸ್ಥೆ ಆತಂಕದ ದೃಷ್ಟಿಯಿಂದ ಮುಂಜಾಗ್ರತಾ ನಿರ್ಬಂಧಗಳನ್ನು ವಿಧಿಸಿದ್ದಾರೆ.

ಪಾಟ್ನಾದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಸಾಕೇತ್ ರಂಜನ್ ಅವರು ಭದ್ರತಾ ಕಾರಣಗಳಿಗಾಗಿ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದು ಈ ಕ್ರಮ ಕೈಗೊಳ್ಳಲಾಗಿದ್ದು, ಈ ಸಂಬಂಧ ಎಲ್ಲ ಶಾಲೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ವಿವರಿಸಿದ್ದಾರೆ. ಈ ಆದೇಶ ಮುಜಾಫರ್‍ಪುರ, ನವಾಡ, ಕಿಶನ್‍ಗಂಜ್, ಪುರ್ನಿಯಾ, ಕಟಿಹಾರ್ ಮತ್ತಿತರ ಜಿಲ್ಲೆಗಳ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ, ಕೋಚಿಂಗ್ ಸೆಂಟರ್ ಗಳಿಗೆ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News