ಟಾಟಾ ಗ್ರೂಪ್ ನಿಯಂತ್ರಿತ ಟ್ರಸ್ಟ್ ಮೂಲಕ ರವಾನಿಸಲಾದ ರಾಜಕೀಯ ದೇಣಿಗೆಯಲ್ಲಿ ಬಿಜೆಪಿಗೆ ಸಿಂಹಪಾಲು
PC: x.com/scroll_in
ಹೊಸದಿಲ್ಲಿ: ಟಾಟಾ ಸಮೂಹ ನಿಯಂತ್ರಿಸುವ ಪ್ರೋಗ್ರೆಸ್ಸಿವ್ ಎಲೆಕ್ಟೊರಲ್ ಟ್ರಸ್ಟ್ (ಪಿಇಟಿ) ಮೂಲಕ 2024-25ರಲ್ಲಿ ನೀಡಲಾದ ಒಟ್ಟು 915 ಕೋಟಿ ರೂಪಾಯಿ ರಾಜಕೀಯ ದೇಣಿಗೆಯ ಪೈಕಿ ಶೇಕಡ 83ರನ್ನು ಬಿಜೆಪಿ ಬಾಚಿಕೊಂಡಿದೆ. ಕಾಂಗ್ರೆಸ್ ಪಾಲು ಕೇವಲ ಶೇಕಡ 8.4ರಷ್ಟಿದೆ.
ವಿವಿಧ ಇಲೆಕ್ಟೊರಲ್ ಟ್ರಸ್ಟ್ಗಳ ರಾಜಕೀಯ ದೇಣಿಗೆಯ ವಿವರಗಳು ಇದೀಗ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಇವುಗಳನ್ನು ಪರಿಶೀಲಿಸಿದಾಗ, 2024ರ ಫೆಬ್ರುವರಿಯಲ್ಲಿ ಚುನಾವಣಾ ಬಾಂಡ್ ಗಳನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ ಬಳಿಕವೂ ಬಿಜೆಪಿಯ ಆದಾಯ ಬರಿದಾಗಿಲ್ಲ. ಬಿಜೆಪಿ ಕಚೇರಿ ಪಿಇಟಿಯಿಂದ 757.6 ಕೋಟಿ, ನ್ಯೂ ಡೆಮಾಕ್ರಟಿಕ್ ಇಟಿಯಿಂದ 150 ಕೋಟಿ, ಹಾರ್ಮೊನಿ ಇಟಿಯಿಂದ 30.1 ಕೋಟಿ, ಟ್ರಂಪ್ ಇಟಿಯಿಂದ 21 ಕೋಟಿ, ಜನಕಲ್ಯಾಣ ಇಟಿಯಿಂದ 9.5 ಲಕ್ಷ, ಇಂಝಿಗ್ರೇಟಿಗ್ ಇಟಿಯಿಂದ 7.75 ಲಕ್ಷ ರೂಪಾಯಿ ದೇಣಿಗೆ ಸ್ವೀಕರಿಸಿದ್ದು, ಒಟ್ಟು 959 ಕೋಟಿ ರೂಪಾಯಿ ಕ್ರೋಢೀಕರಿಸಿದೆ.
ಟಾಟಾ ಸಮೂಹಕ್ಕೆ ಸೇರಿದ ವಿವಿಧ ಉದ್ಯಮಗಳಿಂದ ರಾಜಕೀಯ ದೇಣಿಗೆ ಸ್ವೀಕರಿಸಿ, ಲೋಕಸಭಾ ಚುನಾವಣೆ ನಡೆಯುವ ವರ್ಷ ವಿತರಿಸುವ ಪಿಇಟಿ, 2018-19ರಲ್ಲಿ 454 ಕೋಟಿ ರೂಪಾಯಿಗಳನ್ನು ಮೂರು ಪಕ್ಷಗಳಿಗೆ ವರ್ಗಾಯಿಸಿದೆ. ಇದರಲ್ಲಿ ಶೇಕಡ 75ರಷ್ಟು ಅಂದರೆ 356 ಕೋಟಿ ಬಿಜೆಪಿ ಪಾಲಾಗಿದೆ. ಕಾಂಗ್ರೆಸ್ 55.6 ಕೋಟಿ ಹಾಗೂ ತೃಣಮೂಲ ಕಾಂಗ್ರೆಸ್ 43 ಕೋಟಿ ರೂಪಾಯಿ ದೇಣಿಗೆ ಸ್ವೀಕರಿಸಿವೆ.
2024-25ರ ಪಿಇಟಿ ದೇಣಿಗೆ ವರದಿಯನ್ನು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡದೇ ಇರುವುದರಿಂದ ಆಡಳಿತ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದೆ ಎನ್ನುವುದನ್ನು ತಕ್ಷಣಕ್ಕೆ ಅಂದಾಜಿಸುವಂತಿಲ್ಲ. 2023-24ರಲ್ಲಿ ಬಿಜೆಪಿ, ಪಿಇಟಿಯಿಂದ 724 ಕೋಟಿ ಸೇರಿದಂತೆ 856.7 ಕೋಟಿ ರೂಪಾಯಿಯನ್ನು ಟ್ರಸ್ಟ್ಗಳಿಂದ ಸಂಗ್ರಹಿಸಿದ್ದು, ಬಾಂಡ್ ಮೂಲಕ 1685 ಕೋಟಿ ರೂಪಾಯಿ ದೇಣಿಗೆ ಪಡೆದಿದೆ.
ಕಾಂಗ್ರೆಸ್ ಪಕ್ಷ 2024-25ರಲ್ಲಿ 77.3 ಕೋಟಿ ರೂಪಾಯಿಗಳನ್ನು ಪಿಇಟಿಯಿಂದ, 5 ಕೋಟಿ ರೂಪಾಯಿಗಳನ್ನು ನ್ಯೂ ಡೆಮಾಕ್ರಟಿಕ್ ಇಟಿ ಹಾಗೂ 9.5 ಲಕ್ಷ ರೂಪಾಯಿಗಳನ್ನು ಜನಕಲ್ಯಾಣ ಇಟಿಯಿಮದ ಪಡೆದಿದೆ. ಪಿಇಟಿ ಕಾಂಗ್ರೆಸ್ ಪಕ್ಷಕ್ಕೆ 216.3 ಕೋಟಿ ರೂಪಾಯಿ ದೇಣಿಗೆ ನೀಡಿದ್ದು, ಎಬಿ ಜನರಲ್ ಇಟಿ 15 ಕೋಟಿ ನೀಡಿದೆ ಎಂದು ಕಾಂಗ್ರೆಸ್ ಪಕ್ಷ 2024-25ರ ಅವಧಿಗೆ ಸಲ್ಲಿಸಿದ ದೇಣಿಗೆ ವರದಿಯಲ್ಲಿ ಹೇಳಿದೆ. 2024-25ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು 517 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದು, ಈ ಪೈಕಿ 313 ಕೋಟಿ ರೂಪಾಯಿ ಟ್ರಸ್ಟ್ಗಳಿಂದ ಬಂದಿದೆ.