ಸತ್ಯಪಾಲ್ ಮಲಿಕ್, ಜಗದೀಪ್ ಧನ್ಕರ್ ಅವರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ ಎಂದ ವಕ್ತಾರನನ್ನು ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ
ಕೃಷ್ಣ ಕುಮಾರ್ ಜಾನು (Photo credit: financialexpress.com)
ರಾಜಸ್ಥಾನ : ಜಾಟ್ ಸಮುದಾಯದವಾರದ ದಿವಂಗತ ಸತ್ಯ ಪಾಲ್ ಮಲಿಕ್ ಮತ್ತು ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಬಿಜೆಪಿ ಪಕ್ಷ ನಡೆಸಿಕೊಂಡ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವೀಡಿಯೊ ಹಂಚಿಕೊಂಡ ಬೆನ್ನಲ್ಲೇ ಬಿಜೆಪಿ ವಕ್ತಾರ ಸ್ಥಾನದಿಂದ ಕೃಷ್ಣ ಕುಮಾರ್ ಜಾನು ಎಂಬವರನ್ನು ಉಚ್ಚಾಟಿಸಲಾಗಿದೆ ಎಂದು ವರದಿಯಾಗಿದೆ.
ಹರ್ಷಿನಿ ಕುಲ್ಹಾರಿ ಅವರನ್ನು ಬಿಜೆಪಿಯ ಜುನ್ಜುನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ಆಕ್ಷೇಪಿಸಿ ಜೂನ್‌ನಲ್ಲಿ ನೀಡಿದ ಹೇಳಿಕೆಗಾಗಿ ಕೃಷ್ಣ ಕುಮಾರ್ ಅವರನ್ನು ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಪಕ್ಷವು ಅಧಿಕೃತವಾಗಿ ಹೇಳಿದೆ. ಬಿಜೆಪಿಯ ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಓಂಕಾರ್ ಸಿಂಗ್ ಲಖಾವತ್ ಈ ಕುರಿತು ಶುಕ್ರವಾರ ಆದೇಶವನ್ನು ಹೊರಡಿಸಿದ್ದಾರೆ. ಆದೇಶದಲ್ಲಿ ʼಜೂನ್ 20ರಂದು ನೀಡಿದ ಶೋಕಾಸ್ ನೋಟಿಸ್‌ಗೆ ಸರಿಯಾಗಿ ಉತ್ತರಿಸಿಲ್ಲʼ ಎಂದು ಹೇಳಲಾಗಿದೆ. ಕೃಷ್ಣ ಕುಮಾರ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮತ್ತು ಮಾಜಿ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಅವಮಾನಕರವಾಗಿ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿ ಬಿಜೆಪಿಯ ಜಾಟ್ ಸಮುದಾಯದ ನಾಯಕರನ್ನು ಪ್ರಶ್ನಿಸುವ ಕೃಷ್ಣ ಕುಮಾರ್ ಅವರ ವೀಡಿಯೊ ಕಳೆದ ಎರಡು ದಿನಗಳಿಂದ ವೈರಲ್ ಆಗಿತ್ತು.
ವಿಡಿಯೋದಲ್ಲಿ ಪಕ್ಷದ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿದ್ದ ಮಾಜಿ ರಾಜ್ಯಪಾಲರ ಅಂತ್ಯಕ್ರಿಯೆ ಮತ್ತು ಸರಕಾರ ಅವರ ಬಗ್ಗೆ ತೋರಿದ ತಿರಸ್ಕಾರ ನನಗೆ ತೀವ್ರ ನೋವುಂಟುಮಾಡಿದೆ. ಪಕ್ಷದಲ್ಲಿ ಕೆಲಸ ಮಾಡುತ್ತಿರುವ ಜಾಟ್ ನಾಯಕರಲ್ಲಿ ಈ ಬಗ್ಗೆ ನಾನು ಪ್ರಶ್ನೆಗಳನ್ನು ಕೇಳುವುದಾಗಿ ಹೇಳಿದ್ದರು. ಮಲಿಕ್‌ಗೆ ಸಂಭವಿಸಿದ್ದು ಅವರಿಗೂ ಸಂಭವಿಸುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ ಎಂದು ಅವರು ಜಾಟ್ ನಾಯಕರಲ್ಲಿ ಪ್ರಶ್ನಿಸಿದ್ದರು.