ಅರ್ಮೇನಿಯಾಗೆ ಪಿನಾಕಾ ಮಾರ್ಗದರ್ಶಿ ರಾಕೆಟ್‌ಗಳ ರವಾನೆ
ರಕ್ಷಣಾ ರಫ್ತಿಗೆ ಭಾರತದಿಂದ ಮಹತ್ವದ ಹೆಜ್ಜೆ
Screengrab : X
ಹೊಸದಿಲ್ಲಿ: ಭಾರತದ ರಕ್ಷಣಾ ರಫ್ತಿಗೆ ಮಹತ್ವದ ಉತ್ತೇಜನವಾಗಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವಿವಾರ ನಾಗ್ಪುರದಿಂದ ಅರ್ಮೇನಿಯಾಗೆ ಕಳುಹಿಸಲಾಗುವ ಪಿನಾಕಾ ರಾಕೆಟ್ ವ್ಯವಸ್ಥೆಯ ಮೊದಲ ಬ್ಯಾಚ್‌ಗೆ ಚಾಲನೆ ನೀಡಿದರು.
ನಿಖರತೆ ಮತ್ತು ದೀರ್ಘ ವ್ಯಾಪ್ತಿಗೆ ಹೆಸರುವಾಸಿಯಾದ ಪಿನಾಕಾ ಮಲ್ಟಿ–ಬ್ಯಾರೆಲ್ ರಾಕೆಟ್ ಲಾಂಚರ್‌ಗಳ ರಫ್ತು, ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನದ ವಿಶ್ವಾಸಾರ್ಹ ಪೂರೈಕೆದಾರನಾಗಿ ಭಾರತ ಹೊರಹೊಮ್ಮುತ್ತಿರುವುದನ್ನು ಸೂಚಿಸುತ್ತದೆ. ಕೆಲ ರೂಪಾಂತರಗಳು 75 ಕಿಮೀ ವ್ಯಾಪ್ತಿಯ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದು, ಇತ್ತೀಚಿನ ಪ್ರಯೋಗಾತ್ಮಕ ಆವೃತ್ತಿಗಳು 120 ಕಿಮೀ ವ್ಯಾಪ್ತಿವರೆಗೆ ತಲುಪುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ.
“ಭಾರತ ಇನ್ನು ಮುಂದೆ ಕೇವಲ ಶಸ್ತ್ರಾಸ್ತ್ರ ಆಮದುದಾರವಲ್ಲ; ರಫ್ತುದಾರನಾಗುವ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿದೆ.” ಖಾಸಗಿ ವಲಯದ ಹೆಚ್ಚುತ್ತಿರುವ ಭಾಗವಹಿಸುವಿಕೆಯಿಂದಾಗಿ, ದಶಕದ ಹಿಂದೆ ಒಳಗೊಂಡಿದ್ದ ಸುಮಾರು 1,000 ಕೋಟಿ ರೂ.ಗಿಂತ ಕಡಿಮೆಯಿದ್ದ ರಕ್ಷಣಾ ರಫ್ತು ಈಗ 24,000 ಕೋಟಿ ರೂ.ಗಳ ದಾಖಲೆಗೆ ಏರಿದೆ ಎಂದು ರಾಜನಾಥ್ ಸಿಂಗ್ ಈ ಸಂದರ್ಭದಲ್ಲಿ ಹೇಳಿದರು. 2014ರಲ್ಲಿ 46,425 ಕೋಟಿ ರೂ.ವಾಗಿದ್ದ ದೇಶೀಯ ರಕ್ಷಣಾ ಉತ್ಪಾದನೆ ಈಗ ಸುಮಾರು 1.51 ಲಕ್ಷ ಕೋಟಿ ರೂ.ಕ್ಕೆ ಏರಿದೆ ಎಂದು ಅವರು ಹೇಳಿದರು.
ಏಪ್ರಿಲ್ 2022ರಲ್ಲಿ ಯಶಸ್ವಿಯಾಗಿ ನಡೆದ ಪ್ರಯೋಗಗಳ ಬಳಿಕ ಭಾರತೀಯ ಸೇನೆ ಪಿನಾಕಾ ಎಂಕೆ–ಐ (ಇಪಿಆರ್ಎಸ್) ವರ್ಧಿತ ರೂಪಾಂತರವನ್ನು ತನ್ನ ಸೇವೆಗೆ ಸೇರಿಸಿಕೊಂಡಿದೆ. ಮೂಲತಃ 37.5 ಕಿಮೀ ವ್ಯಾಪ್ತಿಯೊಂದಿಗೆ ರೂಪುಗೊಂಡಿದ್ದ ಪಿನಾಕಾವನ್ನು ಕಾಲಕ್ರಮೇಣ ಹೆಚ್ಚಿನ ವ್ಯಾಪ್ತಿ ಹಾಗೂ ಪರಿಣಾಮಕಾರಿತ್ವಕ್ಕಾಗಿ ನವೀಕರಿಸಲಾಗಿದೆ. ಸುಮಾರು 2,500 ಕೋಟಿ ರೂ.ಗಳ ಪ್ರಸ್ತಾವನೆಯಡಿ, ಸೇನೆ 120 ಕಿಮೀ ಸ್ಟ್ರೈಕ್-ರೆಂಜ್ ರಾಕೆಟ್‌ಗಳನ್ನು ಸೇರಿಸುವ ಯೋಜನೆ ಪರಿಗಣಿಸುತ್ತಿದೆ.
ಸೆಪ್ಟೆಂಬರ್ 2022ರಲ್ಲಿ ಅರ್ಮೇನಿಯಾ ಭಾರತದಿಂದ ನಾಲ್ಕು ಪಿನಾಕಾ ಮಲ್ಟಿ-ಬ್ಯಾರೆಲ್ ಲಾಂಚರ್ ಬ್ಯಾಟರಿಗಳು, ಟ್ಯಾಂಕ್-ವಿರೋಧಿ ರಾಕೆಟ್‌ಗಳು ಹಾಗೂ ಸೌಲಭ್ಯಗಳಿಗಾಗಿ ಸುಮಾರು 2,000 ಕೋಟಿ ರೂ. (ಸುಮಾರು 250 ಮಿಲಿಯನ್ ಡಾಲರ್) ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿತು. ಪಿನಾಕಾದ ವಿತರಣೆ ಜುಲೈ 2023ರಿಂದ ಆರಂಭವಾಗಿ ನವೆಂಬರ್ 2024ರೊಳಗೆ ಪೂರ್ಣಗೊಂಡಿತು. ಈಗ ಪಿನಾಕಾ ರಾಕೆಟ್‌ಗಳ ಮೊದಲ ಬ್ಯಾಚ್ ರವಾನೆಗೊಂಡಿದೆ.
1980ರ ದಶಕದ ಉತ್ತರಾರ್ಧದಲ್ಲಿ ಡಿಆರ್‌ಡಿಓ ಪಿನಾಕಾ ಅಭಿವೃದ್ಧಿಯನ್ನು ಪ್ರಾರಂಭಿಸಿತ್ತು. ರಷ್ಯಾದ ‘ಗ್ರಾಡ್’ ಮಲ್ಟಿ-ಬ್ಯಾರೆಲ್ ಸಿಸ್ಟಮ್‌ಗೆ ದೇಶೀಯ ಪರ್ಯಾಯವಾಗಿ ರೂಪುಗೊಂಡ ಈ ವ್ಯವಸ್ಥೆಯನ್ನು ಟಾಟಾ ಅಡ್ವಾನ್ಸಡ್ ಸಿಸ್ಟಮ್ಸ್, ಸೋಲಾರ್ ಇಂಡಸ್ಟ್ರೀಸ್, ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ ಮತ್ತು ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್‌ಗಳ ಸಹಭಾಗಿತ್ವದಲ್ಲಿ ಉತ್ಪಾದಿಸಲಾಗುತ್ತಿದೆ.
ಪಿನಾಕಾ ಜೊತೆಗೆ, ಭಾರತ ತನ್ನ ದೇಶೀಯ ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನೂ ರಫ್ತಿಗೆ ಮುಂದಿಟ್ಟಿದ್ದು, ವಿವಿಧ ರಾಷ್ಟ್ರಗಳು ಅದಕ್ಕೆ ಆಸಕ್ತಿ ತೋರಿದೆ.