ಐಎಎಸ್, ಐಪಿಎಸ್ ಅಧಿಕಾರಿಗಳ ಮಕ್ಕಳೂ ಮೀಸಲಾತಿ ಲಾಭ ಪಡೆಯಬೇಕೇ?: ನ್ಯಾ. ಬಿ.ಆರ್. ಗವಾಯಿ ಪ್ರಶ್ನೆ
ನ್ಯಾ. ಬಿ.ಆರ್. ಗವಾಯಿ (ANI)
ಹೊಸದಿಲ್ಲಿ: ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದ ಐಎಎಸ್ ಮತ್ತು ಐಪಿಎಸ್ನಂತಹ ಅಖಿಲ ಭಾರತ ಸೇವೆಗಳ ಅಧಿಕಾರಿಗಳ ಮಕ್ಕಳೂ ಮೀಸಲಾತಿಯ ಲಾಭವನ್ನು ಪಡೆಯಬೇಕೇ ಎಂದು ಸ್ವತಃ ದಲಿತರಾಗಿರುವ ಮತ್ತು ಮುಂದಿನ ವರ್ಷದ ಮೇ ತಿಂಗಳಲ್ಲಿ ಭಾರತದ ಮುಖ್ಯ ನ್ಯಾಯಾಧೀಶ ಹುದ್ದೆಗೇರಲಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಬಿ.ಆರ್.ಗವಾಯಿ ಅವರು ಪ್ರಶ್ನಿಸಿದ್ದಾರೆ.
ಮೀಸಲಾತಿಗೆ ಸಂಬಂಧಿಸಿದ ತನ್ನ ಆದೇಶವನ್ನು ಪಂಜಾಬ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಪಂಜಾಬ್ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಸಂದರ್ಭದಲ್ಲಿ ನ್ಯಾ.ಗವಾಯಿ ಈ ಮಹತ್ವದ ಪ್ರಶ್ನೆಯನ್ನು ಕೇಳಿದರು.
ಪಂಜಾಬಿನ ಆಗಿನ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರವು ವಾಲ್ಮೀಕಿಗಳು ಮತ್ತು ಮಝಬಿ (ಸಿಕ್ಖರು)ಗಳನ್ನು ಮಹಾದಲಿತರು ಎಂದು ಗುರುತಿಸಿತ್ತು ಮತ್ತು ಪಂಜಾಬ ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ (ಸೇವೆಯಲ್ಲಿ ಮೀಸಲಾತಿ) ಕಾಯ್ದೆ, 2006ರಡಿ ನೇಮಕಾತಿಗಳನ್ನು ನಡೆಸಲಾಗುವ ಶೇ.15ರಷ್ಟು ಸರಕಾರಿ ಉದ್ಯೋಗಗಳ ಕೋಟಾದಲ್ಲಿ ಶೇ.50ರಷ್ಟನ್ನು ಅವರಿಗೆ ಮೀಸಲಿರಿಸಿತ್ತು. ಪಂಜಾಬ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು
ಸರಕಾರದ ಈ ಕ್ರಮವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಈಗಿನ ಆಪ್ ಸರಕಾರವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವಿ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಮನಾಥ, ಬೇಲಾ ಎಂ.ತ್ರಿವೇದಿ, ಪಂಕಜ್ ಮಿತ್ತಲ್ ಮತ್ತು ಸತೀಶಚಂದ್ರ ಮಿಶ್ರಾ ಅವರ ಪೀಠದ ಎದುರು ವಾದವನ್ನು ಮಂಡಿಸಿದ ಪಂಜಾಬಿನ ಅಡ್ವೋಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಅವರು,ಹಿಂದುಳಿದ ವರ್ಗಗಳ ಸಮುದಾಯದಲ್ಲಿ ಅತ್ಯಂತ ಹಿಂದುಳಿದವರನ್ನು ಗುರುತಿಸಬೇಕು ಮತ್ತು ಲಭ್ಯವಿರುವ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ಅವರನ್ನು ಸಮಾನರನ್ನಾಗಿಸಲು ಮಾರ್ಗಗಳನ್ನು ಒದಗಿಸಬೇಕು ಎಂದು ಹೇಳಿದರು.
ನೇಮಕಾತಿ ಪರೀಕ್ಷೆಗಳಲ್ಲಿ ಶೇ.99ರಷ್ಟು ಅಂಕಗಳನ್ನು ಗಳಿಸಿದ ಮುಂದುವರಿದ ವರ್ಗದ ವ್ಯಕ್ತಿಯು ಜೀವನದಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿರುತ್ತಾನೆ,ಅದೇ ಶೇ.56ರಷ್ಟು ಅಂಕ ಪಡೆದ ಹಿಂದುಳಿದ ವರ್ಗದ ವ್ಯಕ್ತಿಯು ಯಾವುದೇ ಮೂಲಸೌಲಭ್ಯಗಳಿಲ್ಲದೆ ಪರದಾಡಿರುತ್ತಾನೆ. ಹೀಗಾಗಿ ಸರಕಾರಿ ಉದ್ಯೋಗಗಳಲ್ಲಿ ಶೇ.99ರಷ್ಟು ಅಂಕ ಪಡೆದ ಮುಂದುವರಿದ ವರ್ಗದ ವ್ಯಕ್ತಿಗಿಂತ ಶೇ.56ರಷ್ಟು ಅಂಕ ಪಡೆದ ಹಿಂದುಳಿದ ವರ್ಗದ ವ್ಯಕ್ತಿಗೆ ಆದ್ಯತೆಯನ್ನು ನೀಡಬೇಕು ಎಂದು ವಾದಿಸಿದ ಅವರು,ಎಸ್ಸಿ ಎಂದು ವರ್ಗೀಕರಿಸಲಾಗಿರುವ ಸಮುದಾಯವು ಸರಕಾರಿ ಉದ್ಯೋಗಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ಪಡೆದು ಸಾಮಾಜಿಕ ವಲಯಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದ ಬಳಿಕ ಅದನ್ನು ಮೀಸಲಾತಿಗೆ ಅರ್ಹರ ಪಟ್ಟಿಯಿಂದ ತೆಗೆದುಹಾಕಬಹುದು. ಮೀಸಲಾತಿ ಶಾಶ್ವತವಾಗಿರಬೇಕು ಎಂದು ಸಂವಿಧಾನವನ್ನು ರೂಪಿಸಿದವರು ಸೇರಿದಂತೆ ಯಾರೂ ಉದ್ದೇಶಿಸಿರಲಿಲ್ಲ ಎಂದು ಹೇಳಿದರು.
ಈ ಹಂತದಲ್ಲಿ ನ್ಯಾ.ಗವಾಯಿ ಅವರು,ಐಎಎಸ್ ಮತ್ತು ಐಪಿಎಸ್ ನಂತಹ ಹುದ್ದೆಯಲ್ಲಿರುವ ವ್ಯಕ್ತಿ ಅತ್ಯುತ್ತಮ ಸೌಲಭ್ಯಗಳನ್ನು ಪಡೆಯುತ್ತಾನೆ, ಆದರೂ ಇಂತಹವರ ಮಕ್ಕಳೂ ಮೀಸಲಾತಿಯ ಲಾಭಗಳನ್ನು ಪಡೆದುಕೊಳ್ಳುವುದನ್ನು ಮುಂದುವರಿಸುತ್ತಾರೆ. ಇದು ಮುಂದುವರಿಯಬೇಕೇ ಎಂದು ಪ್ರಶ್ನಿಸಿದರು.
ಸರಕಾರಿ ಸೇವೆಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯದ ಮೂಲಕ ಪ್ರಗತಿ ಹೊಂದಿದವರು ಎಸ್ಸಿ ವ್ಯಾಪ್ತಿಯಲ್ಲಿನ ವಂಚಿತ ಸಮುದಾಯಗಳಿಗೆ ದಾರಿ ಮಾಡಿಕೊಡಬೇಕು ಎಂದು ಪಂಜಾಬ ಸರಕಾರವು ವಾದಿಸಿತು