ಬ್ರಿಟನ್ | ದತ್ತಾಂಶ ಸೋರಿಕೆ ಬಳಿಕ ರಹಸ್ಯವಾಗಿ ಸಾವಿರಾರು ಅಫ್ಘಾನಿಗಳ ಸ್ಥಳಾಂತರ; ದಾಖಲೆಗಳಿಂದ ಬಹಿರಂಗ
PC : dailyexcelsior.com
ಹೊಸದಿಲ್ಲಿ: ರಕ್ಷಣಾ ಸಚಿವಾಲಯ(ಎಂಒಡಿ)ದ ದತ್ತಾಂಶ ಸೋರಿಕೆಯು ಅಫ್ಘಾನಿಗಳ ವೈಯಕ್ತಿಕ ವಿವರಗಳನ್ನು ಬಹಿರಂಗಗೊಳಿಸಿದ ಬಳಿಕ ಬ್ರಿಟನ್ ಸದ್ದಿಲ್ಲದೆ ಸಾವಿರಾರು ಅಫ್ಘಾನಿಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಆರಂಭಿಸಿರುವುದನ್ನು ಹೊಸದಾಗಿ ಬಿಡುಗಡೆಗೊಂಡಿರುವ ನ್ಯಾಯಾಲಯದ ದಾಖಲೆಗಳು ಮತ್ತು ಅಧಿಕೃತ ವರದಿಗಳು ತೋರಿಸಿವೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆಯು ವರದಿ ಮಾಡಿದೆ.
ದತ್ತಾಂಶ ಉಲ್ಲಂಘನೆಯು ಫೆಬ್ರವರಿ 2022ರಲ್ಲಿ ಸಂಭವಿಸಿತ್ತು. ರಕ್ಷಣಾ ಅಧಿಕಾರಿಯೋರ್ವರು ಅಫ್ಘಾನ್ ಮರುಸ್ಥಳಾಂತರ ಮತ್ತು ನೆರವು ನೀತಿಯಡಿ ಅರ್ಜಿ ಸಲ್ಲಿಸಿದ್ದ ಸುಮಾರು 19,000 ಅಫ್ಘಾನಿಗಳ ವೈಯಕ್ತಿಕ ಮಾಹಿತಿಗಳನ್ನೊಳಗೊಂಡ ಕಡತವನ್ನು ತಪ್ಪಾಗಿ ಕಳುಹಿಸಿದ್ದರು.
ಆಗಸ್ಟ್ 2023ರಲ್ಲಿ ಭಾಗಶಃ ದತ್ತಾಂಶಗಳು ಫೇಸ್ ಬುಕ್ ನಲ್ಲಿ ಪ್ರಕಟಗೊಳ್ಳುವವರೆಗೂ ಈ ತಪ್ಪು ಎಂಒಡಿಯ ಗಮನಕ್ಕೆ ಬಂದಿರಲಿಲ್ಲ.
ಎಪ್ರಿಲ್ 2024ರಲ್ಲಿ ಬ್ರಿಟನ್ ಸರಕಾರವು ‘ಅಫ್ಘಾನಿಸ್ತಾನ್ ರೆಸ್ಪಾನ್ಸ್ ರೂಟ್(ಎಆರ್‌ಆರ್)’ ಎಂಬ ರಹಸ್ಯ ಯೊಜನೆಯನ್ನು ರೂಪಿಸಿತ್ತು.
ಸುಮಾರು 4,500 ಪೀಡಿತ ಅಫ್ಘಾನಿಗಳು ಬ್ರಿಟನ್ ನಲ್ಲಿ ಅಥವಾ ಸ್ಥಳಾಂತರ ಪ್ರಕ್ರಿಯೆಯಲ್ಲಿದ್ದಾರೆ ಮತ್ತು ಈ ಯೊಜನೆಗೆ ಈವರೆಗೆ ಸುಮಾರು 400 ಮಿಲಿಯನ್ ಪೌಂಡ್ ವೆಚ್ಚವಾಗಿದೆ ಎಂದು ರಕ್ಷಣಾ ಸಚಿವ ಜಾನ್ ಹೀಲಿ ಸುದ್ದಿಸಂಸ್ಥೆಗೆ ತಿಳಿಸಿದರು.
ಸುಮಾರು 20,000 ಜನರಿಗೆ ಮರುಸ್ಥಳಾಂತರದ ಅಗತ್ಯವಿರಬಹುದು ಎಂದು ನ್ಯಾಯಾಲಯದ ದಾಖಲೆಗಳು ತೋರಿಸಿದ್ದು, ಕಾನೂನು ವೆಚ್ಚಗಳು ಮತ್ತು ಪರಿಹಾರವನ್ನು ಸೇರಿಸಿದರೆ ಒಟ್ಟು ವೆಚ್ಚವು ಬಿಲಿಯನ್ ಗಳಿಗೆ ಏರಲಿದೆ.
ಸರಕಾರವು ಸೂಪರ್ ಇಂಜೆಕ್ಷನ್ ಅಡಿ ಕಾರ್ಯಾಚರಣೆಯನ್ನು ರಹಸ್ಯವಾಗಿಟ್ಟಿತ್ತು. ಸೂಪರ್ ಇಂಜೆಕ್ಷನ್ ಪ್ರಕರಣದ ಯಾವುದೇ ಉಲ್ಲೇಖವನ್ನು ನಿಷೇಧಿಸುವ ನ್ಯಾಯಾಲಯದ ಆದೇಶವಾಗಿದೆ. ‘ದಿ ಇಂಡಿಪೆಂಡೆಂಟ್’ ವರದಿ ಮಾಡಿರುವಂತೆ ತಾಲಿಬಾನ್ ಗೆ ಸೋರಿಕೆಯ ಬಗ್ಗೆ ತಿಳಿದರೆ ಜನರ ಜೀವಕ್ಕೆ ಅಪಾಯವಿದೆ ಎಂದು ಎಂಒಡಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸರಕಾರವು ವಿಷಯದ ಪರಿಶೀಲನೆಗಾಗಿ ನಿವೃತ್ತ ಸರಕಾರಿ ಅಧಿಕಾರಿ ಪಾಲ್ ರಿಮ್ಮರ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಅಫ್ಘಾನಿಸ್ತಾನ್ ಇನ್ನೂ ಅಪಾಯಕಾರಿಯಾಗಿದ್ದು, ತಾಲಿಬಾನ್ ಈಗಾಗಲೇ ಇಂತಹುದೇ ಮಾಹಿತಿಯನ್ನು ಹೊಂದಿರುವ ಸಾಧ್ಯತೆಯಿದೆ ಎಂಬ ನಿರ್ಣಯಕ್ಕೆ ಅದು ಬಂದಿದೆ. ಇನ್ನು ಮುಂದೆ ಸೂಪರ್ ಇಂಜೆಕ್ಷನ್ ಅಗತ್ಯವಿಲ್ಲ ಎಂದು ಎಂಒಡಿ ಒಪ್ಪಿಕೊಂಡ ಬಳಿಕ ಜುಲೈ 4,2025ರಂದು ಅದನ್ನು ತೆರವುಗೊಳಿಲಾಗಿದೆ.
ಎ ಆರ್ ಆರ್ ಮುಂದಿನ ಐದು ವರ್ಷಗಳಲ್ಲಿ ಅಂದಾಜು ಏಳು ಶತಕೋಟಿ ಪೌಂಡ್ ವೆಚ್ಚದಲ್ಲಿ 25,000 ಜನರಿಗೆ ನೆರವಾಗಬಹುದು ಎಂದು ಹಿಂದಿನ ದಾಖಲೆಗಳು ಹೇಳಿದ್ದರೆ,ಇತ್ತೀಚಿನ ಪುನರ್‌ಪರಿಶೀಲನೆಯು ಯೋಜನೆಯ ಪ್ರಮಾಣವು ದತ್ತಾಂಶ ಸೋರಿಕೆಯು ಒಡ್ಡಿರುವ ಬೆದರಿಕೆಗೆ ಅನುಗುಣವಾಗಿಲ್ಲದಿರಬಹುದು ಎಂದು ಹೇಳಿದೆ.
ಎಪ್ರಿಲ್ 2021ರಲ್ಲಿ ಆರಂಭಗೊಂಡಿದ್ದ ಅಫ್ಘಾನ್ ಮರುಸ್ಥಳಾಂತರ ಮತ್ತು ನೆರವು ಯೋಜನೆಯನ್ನು ಈ ತಿಂಗಳ ಆರಂಭದಲ್ಲಿ ವಲಸೆ ನೀತಿಗಳಲ್ಲಿ ಬದಲಾವಣೆಗಳ ಹಿನ್ನೆಲೆಯಲ್ಲಿ ಹೊಸ ಅರ್ಜಿದಾರರಿಗೆ ಮುಚ್ಚಲಾಗಿದೆ.