×
Ad

ಬುಲಂದ್‌ ಶಹರ್‌ ಇನ್ಸ್‌ಪೆಕ್ಟರ್‌ ಹತ್ಯೆ ಆರೋಪಿ ಈಗ ಬಿಜೆಪಿ ಮಂಡಲಾಧ್ಯಕ್ಷ

Update: 2024-01-09 19:35 IST

ಸುಬೋಧ್ ಕುಮಾರ್ ಸಿಂಗ್ | Photo: indianexpress.com

ಲಕ್ನೋ: 2018ರಲ್ಲಿ ಉತ್ತರಪ್ರದೇಶದ ಬುಲಂದ್‌ ಶಹರ್‌ ನಲ್ಲಿ ನಡೆದ ಪೊಲೀಸ್ ಇನ್ಸ್‌ಪೆಕ್ಟರ್‌ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ನಾಯಕನೊಬ್ಬನನ್ನು ರಾಜ್ಯದಲ್ಲಿ ಪಕ್ಷದ ಮಂಡಲಾಧ್ಯಕ್ಷನಾಗಿ ನೇಮಿಸಲಾಗಿದೆ.

ಬುಲಂದ್‌ ಶಹರ್‌ ಜಿಲ್ಲೆಯಲ್ಲಿ ಬಿಜೆಪಿಯು 31 ವಲಯ ಅಧ್ಯಕ್ಷರುಗಳನ್ನು ಹೊಂದಿದೆ. ಈ ಪೈಕಿ ಬಿಬಿ ನಗರ ಮಂಡಲದ ಅಧ್ಯಕ್ಷನಾಗಿ ಸಚಿನ್ ಅಹ್ಲಾವತ್ನನ್ನು ನೇಮಿಸಲಾಗಿದೆ.

ಸರಕಾರಿ ಅಧಿಕಾರಿಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಗಲಭೆ ಸೃಷ್ಟಿಸಿ ಅಧಿಕಾರಿಗೆ ಹಲ್ಲೆ ನಡೆಸಿದ ಆರೋಪವನ್ನು ಸಚಿನ್ ಅಹ್ಲಾವತ್ ಎದುರಿಸುತ್ತಿದ್ದಾನೆ.

2018 ಡಿಸೆಂಬರ್ 3ರಂದು ಉದ್ರಿಕ್ತ ಜನರ ತಂಡವೊಂದು ಪೊಲೀಸರ ಮೇಲೆ ದಾಳಿ ನಡೆಸಿದಾಗ ಇನ್ಸ್‌ಪೆಕ್ಟರ್‌ ಸುಬೋಧ್ ಕುಮಾರ್ ಸಿಂಗ್ ಮತ್ತು 20 ವರ್ಷದ ವಿದ್ಯಾರ್ಥಿ ಸುಮಿತ್ ಸಾವಿಗೀಡಾಗಿದ್ದರು. ಮಹಾವ್ ಗ್ರಾಮದ ಹೊಲವೊಂದರಲ್ಲಿ ಜಾನುವಾರುಗಳ ಕಳೇಬರಗಳು ಪತ್ತೆಯಾದ ಬಳಿಕ ಅಲ್ಲಿ ಗಲಭೆ ಆರಂಭವಾಗಿತ್ತು.

ಅಹ್ಲಾವತ್, ಅಂದು ಬಜರಂಗ ದಳದ ಸಂಚಾಲಕನಾಗಿದ್ದ ಯೋಗೇಶ್ ರಾಜ್ ಎಂಬಾತನಿಗೆ ಫೋನ್ ಮಾಡಿ, ಗ್ರಾಮದಲ್ಲಿ ಗೋವುಗಳ ಹತ್ಯೆಯಾಗಿದೆ ಎಂಬ ಮಾಹಿತಿ ನೀಡಿದ್ದನು ಎನ್ನಲಾಗಿದೆ. ಬಳಿಕ, ಸ್ಥಳದಲ್ಲಿ ಗುಂಪೊಂದು ಜಮಾಯಿಸಿ ಪ್ರತಿಭಟನೆ ನಡೆಸಿತು. ಯೋಗೇಶ್ ರಾಜ್ ಕೂಡ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.

ಇನ್ಸ್‌ಪೆಕ್ಟರ್‌ ಸುಭೋದ್ಕುಮಾರ್ ಸಿಂಗ್ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಪನ್ನು ಚದುರಿಸಲು ಯತ್ನಿಸಿದಾಗ ಉದ್ರಿಕ್ತ ಜನರು ಪೊಲೀಸರ ಮೇಲೆ ದಾಳಿ ನಡೆಸಿದರು. ಕೆಲವು ದುಷ್ಕರ್ಮಿಗಳು ಇನ್ಸ್‌ಪೆಕ್ಟರ್‌ ರನ್ನು ಅಟ್ಟಿಸಿಕೊಂಡು ಹೋಗಿ ಅವರ ಮೇಲೆ ಕೊಡಲಿಯಿಂದ ದಾಳಿ ನಡೆಸಿದರು ಎಂದು ಆರೋಪಿಸಲಾಗಿದೆ. ಬಳಿಕ ಅವರ ಮೃತದೇಹವು ಸ್ಥಳದಲ್ಲಿ ಪತ್ತೆಯಾಗಿತ್ತು.

ಘಟನೆಗೆ ಸಂಬಂಧಿಸಿ ಉತ್ತರಪ್ರದೇಶ ಪೊಲಿಸರು ಎರಡು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಒಂದು ಗೋಹತ್ಯೆಗೆ ಸಂಬಂಧಿಸಿದ್ದಾಗಿದ್ದರೆ, ಇನ್ನೊಂದು ಇನ್ಸ್‌ಪೆಕ್ಟರ್‌ ಮತ್ತು ವಿದ್ಯಾರ್ಥಿಯ ಹತ್ಯೆಗೆ ಸಂಬಂಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News