ವಿಮಾನ ದುರಂತ | ಕೆನಡಾ ಪ್ರಜೆ ಭಾರತೀಯ ಮೂಲದ ದಂತವೈದ್ಯೆ ಮೃತ್ಯು
ನಿರಾಲಿ ಪಟೇಲ್ | PC: NDTV
ಒಟ್ಟಾವಾ(ಕೆನಡಾ): ಭಾರತೀಯ ಮೂಲದ ದಂತವೈದ್ಯೆ ನಿರಾಲಿ ಪಟೇಲ್(32) ಅವರು ಅಹ್ಮದಾಬಾದ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಏಕೈಕ ಕೆನಡಾ ಪ್ರಜೆಯಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಟೊರೊಂಟೋದ ಎಟೋಬಿಕೋಕ್ ನಿವಾಸಿಯಾಗಿದ್ದ ಪಟೇಲ್ ಭಾರತದಲ್ಲಿ ಪ್ರವಾಸ ವನ್ನು ಮುಗಿಸಿ ಕೆನಡಾಕ್ಕೆ ಮರಳುತ್ತಿದ್ದರು ಎಂದು ಸಿಟಿವಿ ನ್ಯೂಸ್ ಟೊರೊಂಟೋ ವರದಿ ಮಾಡಿದೆ.
ನಿರಾಲಿಯವರ ಪತಿ ತಮ್ಮ ಒಂದು ವರ್ಷದ ಮಗುವಿನೊಂದಿಗೆ ಭಾರತಕ್ಕೆ ತೆರಳುತ್ತಿದ್ದಾರೆ ಎಂದು ಅದು ತಿಳಿಸಿದೆ.
ಇದು ಅತ್ಯಂತ ಆಘಾತವನ್ನುಂಟು ಮಾಡಿದೆ. ಈ ದುಃಖವನ್ನು ಹೇಳಿಕೊಳ್ಳಲು ಪದಗಳೇ ಸಿಗುತ್ತಿಲ್ಲ ಎಂದು ಪಟೇಲ್ ಕುಟುಂಬವನ್ನು ಬಲ್ಲ ಸಮುದಾಯ ನಾಯಕ ಡಾನ್ ಪಟೇಲ್ ಸುದ್ದಿಸಂಸ್ಥೆಗೆ ತಿಳಿಸಿದರು.
ನಿರಾಲಿ ನಾಲ್ಕೈದು ದಿನಗಳಿಗೆ ಭಾರತಕ್ಕೆ ಭೇಟಿ ನೀಡಿದ್ದರು. ಅವರ ಹೆತ್ತವರು,ಸೋದರ ಮತ್ತು ಅತ್ತಿಗೆ ಬ್ರಾಂಪ್ಟನ್ ನಲ್ಲಿ ವಾಸವಾಗಿದ್ದಾರೆ ಎಂದರು.
ಒಂಟಾರಿಯೋದ ಮಿಸ್ಸಿಸಾವುಗಾದ ಡೆಂಟಲ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಪಟೇಲ್ 2016ರಲ್ಲಿ ಭಾರತದಲ್ಲಿ ದಂತ ವೈದ್ಯಕೀಯ ಪದವಿಯನ್ನು ಪಡೆದಿದ್ದು, 2019ರಲ್ಲಿ ಕೆನಡಾದಲ್ಲಿ ವೃತ್ತಿ ಪರವಾನಿಗೆಯನ್ನು ಸ್ವೀಕರಿಸಿದ್ದರು.
ಒಂಟಾರಿಯೋ ಪ್ರಾಂತ್ಯದ ಪ್ರಧಾನಿ ಡೌಗ್ ಫೋರ್ಡ್ ಪಟೇಲ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ವಿದೇಶಾಂಗ ಸಚಿವೆ ಅನಿತಾ ಆನಂದ ಅವರೂ ಪಟೇಲ್ ನಿಧನಕ್ಕೆ ಸಂತಾಪಗಳನ್ನು ಸೂಚಿಸಿದ್ದರು.