ಮನೆಯಲ್ಲಿ ನಗದು ಪತ್ತೆ ಪ್ರಕರಣ: ನ್ಯಾಯಮೂರ್ತಿ ವರ್ಮಾ ವಿರುದ್ಧದ ಆರೋಪ ದೃಢಪಡಿಸಿದ ಉನ್ನತ ಸಮಿತಿ
ಯಶವಂತ ವರ್ಮಾ | PC : PTI
ಹೊಸದಿಲ್ಲಿ: ಪ್ರಸ್ತುತ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಯಾಗಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಅಗ್ನಿದುರಂತ ಸಂಭವಿಸಿದ ವೇಳೆ ಭಾರಿ ಪ್ರಮಾಣದ ನಗದು ಪತ್ತೆಯಾದ ಪ್ರಕರಣದ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಮೂವರು ನ್ಯಾಯಮೂರ್ತಿಗಳ ಸಮಿತಿ ಆರೋಪವನ್ನು ದೃಢಪಡಿಸಿದೆ ಎಂದು ತಿಳಿದುಬಂದಿದೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ಅಂದರೆ ಮಾರ್ಚ್ 14ರಂದು ವರ್ಮಾ ನಿವಾಸದಲ್ಲಿ ನಗದು ಪತ್ತೆಯಾದ ಬಗ್ಗೆ ವರದಿಯಾಗಿತ್ತು. ವರ್ಮಾ ಅವರನ್ನು ತಪ್ಪಿತಸ್ಥ ಎಂದು ಸಮಿತಿ ನಿರ್ಣಯಿಸಿದ ಹಿನ್ನೆಲೆಯಲ್ಲಿ ಈ ವರದಿಗೆ ಪ್ರತಿಕ್ರಿಯೆ ನೀಡುವಂತೆ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಸೂಚಿಸಿದ್ದು, ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಶೀಲ್ನಾಗು, ಹಿಮಚಾಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ.ಎಸ್.ಸಂಧಾವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಈ ಸಮಿತಿಯಲ್ಲಿದ್ದಾರೆ. ಮೇ 3 ದಿನಾಂಕದ ವರದಿಯನ್ನು ಈ ಸಮಿತಿ ಮೇ 4ರಂದು ಸಿಜೆಐಯವರಿಗೆ ಸಲ್ಲಿಸಿದೆ.
ವರ್ಮಾ ವಿರುದ್ಧದ ಆರೋಪಗಳನ್ನು ದೃಢಪಡಿಸುವ ಸ್ಪಷ್ಟ ಪುರಾವೆಗಳು ಸಮಿತಿಗೆ ದೊರಕಿವೆ ಎನ್ನಲಾಗಿದೆ.
ಸಿಜೆಐ ಸಲಹೆಯಂತೆ ನ್ಯಾಯಮೂರ್ತಿ ವರ್ಮಾ ರಾಜೀನಾಮೆ ನೀಡದೇ ಇದ್ದಲ್ಲಿ, ಈ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿ ವಾಗ್ದಂಡನೆಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಿಜೆಐಯವರಿಗೆ ಪ್ರತಿಕ್ರಿಯೆ ಸಲ್ಲಿಸಲು ಮೇ 9ರವರೆಗೂ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.