×
Ad

ಅಡೆತಡೆಗಳ ಗಡಿ ದಾಟಿದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ; 13 ಪ್ರಾದೇಶಿಕ ಭಾಷೆಗಳಲ್ಲಿ ಕಾನ್ಸ್‌ಟೇಬಲ್ ಪರೀಕ್ಷೆ

Update: 2024-02-11 16:23 IST

Photo: NDTV 

ಹೊಸದಿಲ್ಲಿ: ದೇಶದಾದ್ಯಂತ ಯುವಕರಿಗೆ ಸಮಾನ ಮತ್ತು ಮಹತ್ವದ ಉದ್ಯೋಗಾವಕಾಶವನ್ನು ಒದಗಿಸುವ ಮೂಲಕ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ CRPF, BSF ಮತ್ತು CISF ಗಳ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯು ಮೊದಲ ಬಾರಿಗೆ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲಿದೆ ಎಂದು ಕೇಂದ್ರ ವಾರ್ತಾ ಸಚಿವಾಲಯ ತಿಳಿಸಿದೆ.

ಫೆಬ್ರವರಿ 20 ರಿಂದ ಮಾರ್ಚ್ 7 ರವರೆಗೆ ರಾಷ್ಟ್ರದ 128 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. ಸುಮಾರು 48 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ.

ಈ ನಿರ್ಧಾರವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸ್ಥಳೀಯ ಯುವಕರ ಪ್ರಾತಿನಿಧ್ಯ ಹೆಚ್ಚಿಸಲು ಸಹಾಯ ಮಾಡಲಿದೆ.  ಅದರೊಂದಿಗೆ ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಗೃಹ ವ್ಯವಹಾರಗಳ ಸಚಿವಾಲಯವು ಜನವರಿ 1, 2024 ರಿಂದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳನ್ನು ಸೇರಿಸಲು ನಿರ್ಧರಿಸಿತ್ತು.

ಈ ಹೊಸ ನೀತಿಯ ಅನ್ವಯ ಪ್ರಶ್ನೆ ಪತ್ರಿಕೆಗಳು ಈಗ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಭಾಷೆಗಳಲ್ಲಿ ಲಭ್ಯವಿದೆ.

ಈ ಐತಿಹಾಸಿಕ ನಿರ್ಧಾರದಿಂದ, ದೇಶಾದ್ಯಂತ ಲಕ್ಷಾಂತರ ಯುವಕರು ತಮ್ಮ ಮಾತೃಭಾಷೆ, ಪ್ರಾದೇಶಿಕ ಭಾಷೆಯಲ್ಲಿ ಈ ಪರೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ. ಇದು ಅವರ ಆಯ್ಕೆಯ ಅವಕಾಶಗಳನ್ನು ಹೆಚ್ಚಿಸಲಿದೆ. ಕೇಂದ್ರ ಸರಕಾರದ ಈ ಕ್ರಮದಿಂದ ದೇಶಾದ್ಯಂತ ಯುವ ಜನತೆ ತಮ್ಮ ಮಾತೃಭಾಷೆಯಲ್ಲಿ ಸಿಎಪಿಎಫ್ ಕಾನ್‌ಸ್ಟೇಬಲ್‌  ಪರೀಕ್ಷೆಯಲ್ಲಿ ಭಾಗವಹಿಸಲು ಮತ್ತು ರಾಷ್ಟ್ರ ಸೇವೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಪಡೆಯಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News