×
Ad

ಚಾಂಪಿಯನ್ಸ್ ಟ್ರೋಫಿ: ರಾವಲ್ಪಿಂಡಿಯಲ್ಲಿ ಮಳೆ ಆಡಿದ್ದೇ ಆಟ!

Update: 2025-02-25 22:34 IST

Photo Credit | x.com/MohammadKaif

ರಾವಲ್ಪಿಂಡಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ ತಂಡಗಳ ನಡುವಿನ ‘ಬಿ’ ಗುಂಪಿನ ಪಂದ್ಯವನ್ನು ಮಂಗಳವಾರ ಮಳೆಯಿಂದಾಗಿ ರದ್ದುಗೊಳಿಸಲಾಯಿತು. ಪಂದ್ಯವನ್ನು ವೀಕ್ಷಿಸಲು ರಾವಲ್ಪಿಂಡಿಯಲ್ಲಿ ನೆರೆದ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ನಿರಾಶೆಗೊಂಡರು.

ಭಾರೀ ಮಳೆಯಿಂದಾಗಿ ದಿನವಿಡಿ ಮೈದಾನವನ್ನು ಹೊದಿಕೆಗಳಿಂದ ಮುಚ್ಚಲಾಗಿತ್ತು. ಟಾಸ್ ಕೂಡ ಸಾಧ್ಯವಾಗಲಿಲ್ಲ. ಪಂದ್ಯವನ್ನು ರದ್ದುಗೊಳಿಸಬೇಕಾದ ಗಡುವಿಗೆ 2 ಗಂಟೆ 15 ನಿಮಿಷಗಳು ಇರುವಂತೆಯೇ ರದ್ದುಗೊಳಿಸಲು ಅಧಿಕಾರಿಗಳು ನಿರ್ಧರಿಸಿದರು.

ಲಾಹೋರ್‌ನಲ್ಲಿ ಮುಂಜಾನೆಯೇ ಮಳೆ ಆರಂಭವಾಗಿತ್ತು. ಬಳಿಕ ಮಳೆಯ ತೀವ್ರತೆ ಕಡಿಮೆಯಾದರೂ, ಮಂದ ಬೆಳಕು ಪರಿಸ್ಥಿತಿಯನ್ನು ಹದಗೆಡಿಸಿತು. ಹಾಗಾಗಿ, ಸ್ಥಳೀಯ (ಪಾಕಿಸ್ತಾನಿ) ಸಮಯ ಮಧ್ಯಾಹ್ನ 1:30ಕ್ಕೆ ನಡೆಯಬೇಕಾಗಿದ್ದ ಟಾಸ್‌ನ್ನು ಮುಂದೂಡಲಾಯಿತು.

ನಿರಂತರ ಮಳೆಯಿಂದಾಗಿ ರಕ್ಷಣಾ ಹೊದಿಕೆಗಳ ಮೇಲೆ ನೀರು ಸಂಗ್ರಹವಾಯಿತು. ಇದನ್ನು ತೆಗೆಯಲು ಮೈದಾನದ ಸಿಬ್ಬಂದಿಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಿದರು.

ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯ ಧ್ವಜಗಳನ್ನು ಹಿಡಿದುಕೊಂಡಿದ್ದ ಕಿರು ಸಂಖ್ಯೆಯ ಅಭಿಮಾನಿಗಳು ಆಶೆಯಿಂದ ಕಾದರು. ಆದರೆ, ಅಂತಿಮವಾಗಿ ಪಂದ್ಯ ರದ್ದಾದಾಗ ನಿರಾಶೆಗೊಂಡರು.

ದಕ್ಷಿಣದ ಆಫ್ರಿಕ ಮತ್ತು ಆಸ್ಟ್ರೇಲಿಯ ತಂಡಗಳು ತಮ್ಮ ಹಿಂದಿನ ಪಂದ್ಯಗಳ ದೊಡ್ಡ ವಿಜಯಗಳ ಬಳಿಕ ಈ ಪಂದ್ಯದಲ್ಲಿ ಮುಖಾಮುಖಿಯಾಗಬೇಕಾಗಿತ್ತು. ದಕ್ಷಿಣ ಆಫ್ರಿಕವು ತನ್ನ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 107 ರನ್‌ಗಳಿಂದ ಮಣಿಸಿದರೆ, ಆಸ್ಟ್ರೇಲಿಯವು ತನ್ನ ಮೊದಲ ಪಂದ್ಯದಲ್ಲಿ 352 ರನ್‌ಗಳನ್ನು ಯಶಸ್ವಿಯಾಗಿ ಬೆಂಬತ್ತಿ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು.

ಈಗ ರಾವಲ್ಪಿಂಡಿಯ ಪಂದ್ಯವು ಮಳೆಯಿಂದಾಗಿ ರದ್ದಾಗಿರುವ ಹಿನ್ನೆಲೆಯಲ್ಲಿ, ಉಭಯ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿವೆ.

ಇದರೊಂದಿಗೆ, ‘ಬಿ’ ಗುಂಪಿನ ಎಲ್ಲಾ ನಾಲ್ಕು ತಂಡಗಳಿಗೆ ಸೆಮಿಫೈನಲ್ ತಲುಪುವ ಅವಕಾಶ ಮುಕ್ತವಾಗಿದೆ. ಅದೇ ವೇಳೆ, ‘ಎ’ ಗುಂಪಿನಲ್ಲಿ ಈಗಾಗಲೇ ಭಾರತ ಮತ್ತು ನ್ಯೂಝಿಲ್ಯಾಂಡ್ ಸೆಮಿಫೈನಲ್ ತಲುಪಿವೆ.

► ‘ಬಿ’ ಗುಂಪಿನ ಸಾಧ್ಯತೆಗಳು

ರಾವಲ್ಪಿಂಡಿಯಲ್ಲಿ ನಡೆಯಬೇಕಾಗಿದ್ದ ಪಂದ್ಯ ಮಳೆಯಿಂದಾಗಿ ರದ್ದುಗೊಂಡ ಬಳಿಕ, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ ತಂಡಗಳು ತಲಾ 3 ಅಂಕಗಳನ್ನು ಹೊಂದಿವೆ. ದಕ್ಷಿಣ ಆಫ್ರಿಕವು ಉತ್ತಮ +2.140 ರನ್‌ರೇಟ್‌ನಿಂದಾಗಿ ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ. +0.475 ನೆಟ್ ರನ್‌ರೇಟ್ ಹೊಂದಿರುವ ಆಸ್ಟ್ರೇಲಿಯವು ಎರಡನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧದ ತಮ್ಮ ಅಂತಿಮ ಪಂದ್ಯಗಳನ್ನು ಗೆದ್ದರೆ ಅವುಗಳು ಸೆಮಿಫೈನಲ್‌ಗೆ ತೇರ್ಗಡೆಗೊಳ್ಳುತ್ತವೆ.

ಒಂದು ವೇಳೆ, ಈ ಎರಡು ತಂಡಗಳ ಪೈಕಿ ಒಂದು ತನ್ನ ಅಂತಿಮ ಪಂದ್ಯದಲ್ಲಿ ಸೋತರೆ ಸಂಕೀರ್ಣ ಪರಿಸ್ಥಿತಿಯೊಂದು ಏರ್ಪಡುತ್ತದೆ. ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ತಮ್ಮ ಆರಂಭಿಕ ಪಂದ್ಯಗಳಲ್ಲಿ ಸೋಲನುಭವಿಸಿವೆ. ಈ ಎರಡೂ ತಂಡಗಳು ತಮ್ಮ ಉಳಿದ ಎರಡೂ ಪಂದ್ಯಗಳನ್ನು ಗೆದ್ದರೆ ಅವುಗಳು ಆಸ್ಟ್ರೇಲಿಯ ಅಥವಾ ದಕ್ಷಿಣ ಆಫ್ರಿಕವನ್ನು ಹಿಂದಿಕ್ಕಿ ಸೆಮಿಫೈನಲ್‌ಗೆ ಜಿಗಿಯಬಹುದು.

ಇಂಗ್ಲೆಂಡ್ ಬುಧವಾರ ಲಾಹೋರ್‌ನಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಇದು ಎರಡೂ ತಂಡಗಳಿಗೆ ಗೆಲ್ಲಲೇಬೇಕಾದ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಸೋಲುವ ತಂಡವು ಕೂಟದಿಂದ ತನ್ನಂತಾನೇ ಹೊರಬೀಳುತ್ತದೆ. ಬಳಿಕ, ಇಂಗ್ಲೆಂಡ್ ಕರಾಚಿಯಲ್ಲಿ ಮಾರ್ಚ್ ಒಂದರಂದು ದಕ್ಷಿಣ ಆಫ್ರಿಕ ತಂಡವನ್ನು ಎದುರಿಸಲಿದೆ.

ಅಫ್ಘಾನಿಸ್ತಾನವು ಫೆಬ್ರವರಿ 28ರಂದು ಲಾಹೋರ್‌ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ತನ್ನ ಕೊನೆಯ ಗುಂಪು ಪಂದ್ಯವನ್ನು ಆಡಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News