×
Ad

ಚಂಡೀಗಢ: ದಿಲ್ಲಿ ಮಾದರಿಯಲ್ಲಿ ರೈತರ ಪ್ರತಿಭಟನೆ; ಗಡಿಗಳನ್ನು ಮುಚ್ಚಿದ ಸರಕಾರ

Update: 2023-11-26 22:40 IST

Photo- PTI

ಚಂಡಿಗಡ,: ಬಾಕಿಯಿರುವ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕರೆ ನೀಡಿರುವ ಮೂರು ದಿನಗಳ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯ ಮೂರನೇ ವರ್ಷಾಚರಣೆಯ ಮುನ್ನಾದಿನವಾದ ರವಿವಾರ ಪಂಜಾಬ್ ಮತ್ತು ಹರ್ಯಾಣಗಳಿಂದ ಭಾರೀ ಸಂಖ್ಯೆಯಲ್ಲಿ ರೈತರು ಚಂಡಿಗಡದತ್ತ ಆಗಮಿಸುತ್ತಿದ್ದಾರೆ.

ರವಿವಾರ ಪ್ರತಿಭಟನೆ ಆರಂಭಗೊಂಡಿದೆ. ನೂರಾರು ಟ್ರ್ಯಾಕ್ಟರ್ ರ್ಯಾಲಿಗಳಲ್ಲಿ ರೈತರು ಚಂಡಿಗಡದತ್ತ ಆಗಮಿಸತೊಡಗಿದ್ದು, ರಸ್ತೆಗಳಲ್ಲಿ ರೈತರ ಮಹಾಪೂರವೇ ಹರಿಯುತ್ತಿದೆ. ಇದು ಸಿಂಘು-ಟಿಕ್ರಿ ಗಡಿಯಲ್ಲಿ ನಡೆದಿದ್ದ ರೈತರ ಬೃಹತ್ ಸಮಾವೇಶವನ್ನು ನೆನಪಿಸುತ್ತಿದೆ.

ರೈತರ ಚಂಡಿಗಡ ಪ್ರವೇಶವನ್ನು ತಡೆಯಲು ಪಂಜಾಬ್, ಚಂಡಿಗಡ ಮತ್ತು ಹರ್ಯಾಣಾ ಪೋಲಿಸರು ಅಂತರರಾಜ್ಯ ಗಡಿಗಳನ್ನು ಮುಚ್ಚಿದ್ದಾರೆ.

ಮೊಹಾಲಿಯ ಗುರುದ್ವಾರಾ ಅಮರ ಸಾಹಿಬ್‌ನಲ್ಲಿ ಸೇರಲಿರುವ ರೈತರು ಸೋಮವಾರ ಅಲ್ಲಿಂದ ಚಂಡಿಗಡಕ್ಕೆ ಜಾಥಾದಲ್ಲಿ ಸಾಗಲು ಪ್ರಯತ್ನಿಸಬಹುದು ಎಂದು ಬಲ್ಲ ಮೂಲಗಳು ತಿಳಿಸಿದವು.

ಎರಡು ಡಝನ್‌ಗೂ ಅಧಿಕ ರೈತರ ಒಕ್ಕೂಟಗಳನ್ನು ಒಳಗೊಂಡಿರುವ ಎಸ್‌ಕೆಎಂ ರಾಜ್ಯಪಾಲರು ಮತ್ತು ಪಂಜಾಬ್ ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಬೇಡಿಕೆಗಳ ಪಟ್ಟಿಯನ್ನು ಸಿದ್ಧಗೊಳಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡರು,ಎರಡು ವರ್ಷಗಳ ಹಿಂದೆ ತಮ್ಮ ಐತಿಹಾಸಿಕ ಪ್ರತಿಭಟನೆಯನ್ನು ತಾವು ಹಿಂದೆಗೆದುಕೊಂಡಿದ್ದ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಕೇಂದ್ರ ಸರಕಾರವು ಈವರೆಗೂ ಈಡೇರಿಸಿಲ್ಲ ಎಂದು ಆರೋಪಿಸಿದರು.

ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸುಗಳ ಆಧಾರದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನಿನ ಖಾತರಿ,ಇತರ ಬೆಳೆಗಳಿಗೆ ಎಂಎಸ್‌ಪಿ ವಿಸ್ತರಣೆ,ಪ್ರತಿಭಟನೆ ಸಂದರ್ಭ ಮತ್ತು ಭತ್ತವನ್ನು ಸುಟ್ಟು ಹಾಕಿದ್ದಕ್ಕಾಗಿ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಹಿಂದೆಗೆತ,60 ವರ್ಷ ಮತ್ತು ಮೇಲ್ಪಟ್ಟ ರೈತರಿಗೆ ಮಾಸಿಕ 10,000 ರೂ.ಗಳ ಪಿಂಚಣಿ, ಲಖಿಂಪುರ ಖೇರಿ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ವಿರುದ್ಧ ಕ್ರಮ,‌ ರೈತರು ಮತ್ತು ಕೃಷಿಕಾರ್ಮಿಕರ ಸಾಲ ಮನ್ನಾ,ಪ್ರತಿಭಟನೆ ಸಂದರ್ಭದಲ್ಲಿ ಮೃತ ರೈತರ ಕುಟುಂಬಗಳಿಗೆ ಪರಿಹಾರ,ಉಚಿತ ವಿದ್ಯುತ್ ಪೂರೈಕೆ ಮತ್ತು 2022ರ ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆಯ ಹಿಂದೆಗೆತ,ಪ್ರವಾಹ ಮತ್ತು ಕೀಟಗಳ ದಾಳಿಗಳಿಂದ ಬೆಳೆ ನಷ್ಟಕ್ಕೆ ಪರಿಹಾರ ಇತ್ಯಾದಿಗಳು ರೈತರ ಬೇಡಿಕೆಗಳಲ್ಲಿ ಸೇರಿವೆ.

ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ಆದೇಶಗಳನ್ನು ಉಲ್ಲೇಖಿಸಿರುವ ಪಂಚಕುಲ ಪೋಲಿಸ್ ಆಯುಕ್ತರು ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸುವುದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಚಂಡಿಗಡಕ್ಕೆ ಜಾಥಾದಲ್ಲಿ ತೆರಳಲು ರೈತರು ಪ್ರತ್ಯೇಕ ಪರವಾನಿಗೆಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ ಚಂಡಿಗಡ ಆಡಳಿತವು ರೈತರು ನಗರವನ್ನು ಪ್ರವೇಶಿಸುವುದನ್ನು ತಡೆಯಲು ಮೂರು ಪದರಗಳ ಭದ್ರತೆಯನ್ನು ಏರ್ಪಡಿಸಿದೆ.

ಚಂಡಿಗಡ ಪೋಲಿಸರು ರೈತರ ಪ್ರತಿಭಟನೆಯನ್ನು ಪರಿಗಣಿಸಿ ಸಂಚಾರ ದಟ್ಟಣೆ ಉಂಟಾಗಬಹುದಾದ ಮಾರ್ಗಗಳಲ್ಲಿ ಬದಲಿ ಸಂಚಾರ ವ್ಯವಸ್ಥೆಗಳನ್ನು ಮಾಡಿದ್ದಾರೆ.

ಅತ್ತ ಮೊಹಾಲಿಯಲ್ಲಿಯೂ ಕಟ್ಟೆಚ್ಚರವನ್ನು ವಹಿಸಿರುವ ಪೊಲೀಸರು ರೈತರು ಅಲ್ಲಿಂದ ಚಂಡಿಗಡವನ್ನು ಪ್ರವೇಶಿಸುವುದನ್ನು ತಡೆಯಲು ಫೈದಾನ್ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News