×
Ad

ರಾಜಭವನದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ ಎಂಬ ರಾಜ್ಯಪಾಲರ ಹೇಳಿಕೆಯನ್ನು ಅಲ್ಲಗಳೆದ ಚೆನ್ನೈ ಪೊಲೀಸರು; ಸಾಕ್ಷ್ಯ ಬಿಡುಗಡೆ

Update: 2023-10-28 17:01 IST

Photo:X/@Ahmedshabbir20

ಚೆನ್ನೈ: ಅಕ್ಟೋಬರ್ 24ರಂದು ರಾಜಭವನದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ ಎಂಬ ತಮಿಳುನಾಡಿನ ರಾಜಭವನದ ಪ್ರತಿಪಾದನೆಯನ್ನು ಅಕ್ಟೋಬರ್ 27ರಂದು ಗ್ರೇಟರ್ ಚೆನ್ನೈ ಪೊಲೀಸರು ಅಲ್ಲಗಳೆದಿದ್ದಾರೆ. ರಾಜ್ಯಪಾಲ ಆರ್.ಎನ್.ರವಿ ಅವರನ್ನು ಪ್ರತಿನಿಧಿಸುವ ರಾಜಭವನದ ಹೇಳಿಕೆಯಲ್ಲಿ, “ಬಾಂಬ್ ಹೊಂದಿದ್ದ ದುಷ್ಕರ್ಮಿಗಳು ಮುಖ್ಯ ದ್ವಾರದ ಒಳ ನುಗ್ಗಲು ಯತ್ನಿಸಿದರು. ಆದರೆ, ಜಾಗೃತ ಸೆಂಟ್ರಿಗಳು ಅವರನ್ನು ತಡೆದರು ಮತ್ತು ಅತಿಕ್ರಮಣಕಾರರು ರಾಜಭವನದೊಳಗೆ ಎರಡು ಪೆಟ್ರೋಲ್ ಬಾಂಬ್ ಗಳನ್ನು ಎಸೆದು, ಸ್ಥಳದಿಂದ ಪರಾರಿಯಾದರು” ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಪೊಲೀಸರು ಯಾವುದೇ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಂಡಿಲ್ಲ ಅಥವಾ ತಮ್ಮ ದೂರನ್ನೂ ಸ್ವೀಕರಿಸಿಲ್ಲ ಎಂದೂ ಆರೋಪಿಸಲಾಗಿತ್ತು ಎಂದು thenewsminute.com ವರದಿ ಮಾಡಿದೆ.

ಇದರ ಬೆನ್ನಿಗೇ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗ್ರೇಟರ್ ಚೆನ್ನೈ ಪೊಲೀಸರು, ರಾಜಭವನದ ಪ್ರತಿಪಾದನೆಯನ್ನು ಅಲ್ಲಗಳೆದರು ಹಾಗೂ ಮಾಧ್ಯಮಗಳಿಗೆ ವಿವಿಧ ಸಿಸಿಟಿವಿ ತುಣುಕುಗಳು, ಚಿತ್ರಗಳು ಹಾಗೂ ವಿಡಿಯೊಗಳನ್ನು ಬಿಡುಗಡೆಗೊಳಿಸಿದರು. ಈ ಪೈಕಿ ಒಂದು ಸಿಸಿಟಿವಿ ದೃಶ್ಯಾವಳಿಯಲ್ಲಿ ವಿನೋದ್ ಅಲಿಯಾಸ್ ಕರುಕ್ಕ ವಿನೋದ್ ಎಂಬ ವ್ಯಕ್ತಿ ರಾಜಭವನದಿಂದ 30 ಮೀಟರ್ ದೂರ ನಿಂತು ಎರಡು ಪೆಟ್ರೋಲ್ ಬಾಂಬ್ ಗಳನ್ನು ಹೊತ್ತಿಸುತ್ತಿರುವುದು ಹಾಗೂ ಆತನನ್ನು ಇಬ್ಬರು ಗ್ರೇಟರ್ ಚೆನ್ನೈ ಪೊಲೀಸರು ಅಟ್ಟಿಸಿಕೊಂಡು ಹೋಗುತ್ತಿರುವುದು ಸೆರೆಯಾಗಿದೆ.

ಈ ಕುರಿತು thenewsminute.com ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಗ್ರೇಟರ್ ಚೆನ್ನೈನ ಪೊಲೀಸ್ ಆಯುಕ್ತ ಸಂದೀಪ್ ರಾಥೋಡ್, “ಅಲ್ಲಿ ಕೇವಲ ಒಬ್ಬ ದುಷ್ಕರ್ಮಿಯಿದ್ದ. ಆತ ರಾಜಭವನಕ್ಕೆ ನುಗ್ಗಲು ಯತ್ನಿಸಲಿಲ್ಲ ಮತ್ತು ಆತ ಎಸೆದ ಪೆಟ್ರೋಲ್ ಬಾಂಬ್ ಗಳು ರಾಜಭವನ ಕಟ್ಟಡದ ದ್ವಾರದ ತಡೆಗೋಡೆಯ ಬಳಿ ಬಿದ್ದವು. ಅದರಿಂದ ಮುಖ್ಯ ದ್ವಾರಕ್ಕೂ ಹಾನಿಯಾಗಲಿಲ್ಲ. ಆತನನ್ನು ಕೂಡಲೇ ಸೆರೆ ಹಿಡಿದ ಪೊಲೀಸರು, ಆತನ ಬಳಿಯಿದ್ದ ಇನ್ನೂ ಎರಡು ಪೆಟ್ರೋಲ್ ಬಾಂಬ್ ಗಳನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿದರು” ಎಂದು ಮಾಹಿತಿ ನೀಡಿದ್ದಾರೆ. ಆದರೆ, ಈ ಸಾಕ್ಷ್ಯವನ್ನು ಇನ್ನಷ್ಟೇ ರಾಜ್ಯಪಾಲರಿಗೆ ತೋರಿಸಬೇಕಿದೆ ಎಂದೂ ಅವರು ಹೇಳಿದ್ದಾರೆ.

ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ನಡೆದ ಈ ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳು ಅದೇ ದಿನ 5 ಗಂಟೆ ವೇಳೆಗೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ರಾಜಭವನದ ದೂರು ರಾತ್ರಿ 10.24 ಗಂಟೆ ವೇಳೆಗೆ ಸಲ್ಲಿಕೆಯಾಗಿದೆ ಎಂದು ತಿಳಿಸಿದ ಪೊಲೀಸ್ ಆಯುಕ್ತರು, “ನಾವು ಘಟನೆಯ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆ ಪತ್ರದಲ್ಲಿ ಆರೋಪಿಸಲಾಗಿತ್ತು. ನಾವು ಆ ಪತ್ರದಲ್ಲಿನ ವಿಷಯದ ಕುರಿತು ಪರಿಶೀಲಿಸಿ, ಅಗತ್ಯ ಪ್ರತಿಕ್ರಿಯೆ ಅಥವಾ ಕ್ರಮವನ್ನು ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News