×
Ad

ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳು ಮೃತಪಟ್ಟ ಪ್ರಕರಣ : ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಕಂಪೆನಿಯ ಮಾಲಕನ ಬಂಧನ

Update: 2025-10-09 10:25 IST

Photo |indiatoday

ಭೋಪಾಲ್: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಿಸಿದ ತಮಿಳುನಾಡಿನ ಔಷಧ ಕಂಪೆನಿ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಮಾಲಕ ರಂಗನಾಥನ್ ಗೋವಿಂದನ್ ಎಂಬಾತನನ್ನು ಮಧ್ಯಪ್ರದೇಶ ಪೊಲೀಸರು ಗುರುವಾರ ತಡರಾತ್ರಿ ಚೆನ್ನೈನಿಂದ ಬಂಧಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಕೋಲ್ಡ್ರಿಫ್ ಸಿರಪ್ ಸೇವನೆಯಿಂದ ಕನಿಷ್ಠ 20 ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನದಲ್ಲಿಯೂ ಇದೇ ರೀತಿಯ ಸಾವುಗಳು ದಾಖಲಾಗಿವೆ. ಸಿರಪ್ ಸೇವಿಸಿದ ನಂತರ ಹಲವಾರು ಮಕ್ಕಳು ತೀವ್ರ ಮೂತ್ರಪಿಂಡದ ವೈಫಲ್ಯ ಹಾಗೂ ನರಮಂಡಲದ ಹಾನಿಗೆ ಒಳಗಾಗಿದ್ದರು ಎಂದು ವೈದ್ಯಕೀಯ ವರದಿಗಳು ತಿಳಿಸಿವೆ.

ಸಿರಪ್ ದುರಂತದ ನಂತರ ರಂಗನಾಥನ್ ಪರಾರಿಯಾಗಿದ್ದು, ಅವರ ಬಂಧನಕ್ಕೆ 20,000 ಬಹುಮಾನ ಘೋಷಿಸಲಾಗಿತ್ತು. ಮಧ್ಯಪ್ರದೇಶ ಪೊಲೀಸರು ಚೆನ್ನೈನಲ್ಲಿ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಅಕ್ಟೋಬರ್ 5ರಿಂದಲೇ ರಂಗನಾಥನ್ ಅವರ ಚಲನವಲನಗಳ ನಿಗಾ ಇಟ್ಟಿದ್ದರು. ಬೆಳಗಿನ 1.30ರ ಸುಮಾರಿಗೆ ಬಂಧನದ ಬಳಿಕ, ಅವರನ್ನು ಕಾಂಚೀಪುರಂನಲ್ಲಿರುವ ಶ್ರೀಸನ್ ಕಾರ್ಖಾನೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಪ್ರಮುಖ ದಾಖಲೆಗಳು ಮತ್ತು ಉತ್ಪಾದನಾ ಮಾಹಿತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಮಕ್ಕಳ ಶೀತ ಮತ್ತು ಕೆಮ್ಮಿನ ಚಿಕಿತ್ಸೆಗೆ ನೀಡಲಾಗುತ್ತಿದ್ದ ಕೋಲ್ಡ್ರಿಫ್ ಸಿರಪ್ ನಲ್ಲಿ ತಮಿಳುನಾಡು ಔಷಧ ನಿಯಂತ್ರಣ ಪ್ರಾಧಿಕಾರ ನಡೆಸಿದ ಪರೀಕ್ಷೆಗಳಲ್ಲಿ ಡೈಥಿಲೀನ್ ಗ್ಲೈಕಾಲ್ (DEG) ಎಂಬ ವಿಷಕಾರಿ ರಾಸಾಯನಿಕ ಪತ್ತೆಯಾಗಿದೆ. ಈ ರಾಸಾಯನಿಕವನ್ನು ಸಾಮಾನ್ಯವಾಗಿ ಮುದ್ರಣ ಇಂಕ್ ಮತ್ತು ಅಂಟು ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಪರೀಕ್ಷಾ ವರದಿಗಳ ಪ್ರಕಾರ, ಕಂಪೆನಿಯು ಅನುಮತಿಸಲಾದ 0.1 ಶೇಕಡಾ ಮಿತಿಯ ಬದಲು 46–48 ಶೇಕಡಾ DEG ಅನ್ನು ಸಿರಪ್‌ನಲ್ಲಿ ಬಳಸಿದೆ. ಈ ಹಿನ್ನೆಲೆಯಲ್ಲಿ ಔಷಧ ನಿಯಂತ್ರಣ ಪ್ರಾಧಿಕಾರವು ಕಂಪೆನಿಯ ಪರವಾನಗಿಯನ್ನು ಅಮಾನತುಗೊಳಿಸಿ, ಉತ್ಪಾದನೆ ತಕ್ಷಣ ನಿಲ್ಲಿಸಲು ಆದೇಶಿಸಿದೆ.

ಮಧ್ಯಪ್ರದೇಶ ಪೊಲೀಸರು ರಂಗನಾಥನ್ ಅವರನ್ನು ಚಿಂದ್ವಾರಾಗೆ ಕರೆತರಲು ಚೆನ್ನೈ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಪಡೆಯಲು ಮುಂದಾಗಿದ್ದಾರೆ. ತನಿಖೆಯನ್ನು ಈಗ ರಾಸಾಯನಿಕ ಪೂರೈಕೆದಾರರು, ಸ್ಟಾಕಿಸ್ಟ್‌ಗಳು, ವೈದ್ಯಕೀಯ ಪ್ರತಿನಿಧಿಗಳು ಹಾಗೂ ವಿತರಕರವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಸಿರಪ್ ಮಕ್ಕಳವರೆಗೆ ತಲುಪಲು ಕಾರಣವಾದ ಸಂಪೂರ್ಣ ಪೂರೈಕೆ ಸರಪಳಿಯ ಪ್ರತಿಯೊಂದು ಹಂತವನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ.

ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಅನ್ನು 1990ರಲ್ಲಿ ಖಾಸಗಿ ಸಂಸ್ಥೆಯಾಗಿ ನೋಂದಾಯಿಸಲಾಗಿತ್ತು. ಬಳಿಕ ಕಂಪೆನಿಯನ್ನು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಪಟ್ಟಿ‌ಯಿಂದ ತೆಗೆದುಹಾಕಲಾಗಿದ್ದರೂ, ಅದು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ತನಿಖಾ ಮೂಲಗಳು ತಿಳಿಸಿದ್ದಾರೆ. ಈ ಬೆಳವಣಿಗೆ ಔಷಧ ನಿಯಂತ್ರಣ ವ್ಯವಸ್ಥೆಯ ಮೇಲ್ವಿಚಾರಣೆಯ ಲೋಪವನ್ನು ಬಯಲು ಮಾಡಿದೆ.

ಕೋಲ್ಡ್ರಿಫ್ ಸಿರಪ್‌ನಿಂದ ಸಾವುಗಳು ವರದಿಯಾದ ನಂತರ ಒಂಭತ್ತು ರಾಜ್ಯಗಳು ಸಿರಪ್ ಮಾರಾಟವನ್ನು ನಿಷೇಧಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News