ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಇಬ್ಬರು ಮೃತ್ಯು, 20 ಮಂದಿ ನಾಪತ್ತೆ
PC: x.com/ndtv
ಧರ್ಮಶಾಲಾ: ಹಿಮಾಚಲ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಮೇಘಸ್ಫೋಟದಿಂದ ಹಲವೆಡೆ ದಿಢೀರ್ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮನೂನಿ ಖಡ್ ಹೊಳೆಯಿಂದ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ಭಾಗದಲ್ಲಿದ್ದ ಖಾಸಗಿ ಜಲ ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 15-20 ಮಂದಿ ನಾಪತ್ತೆಯಾಗಿದ್ದಾರೆ.
ಹಿಮಾಚಲದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಧಾರಾಕಾರ ಮಳೆ ಇಡೀ ರಾಜ್ಯದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಪರ್ವತ ಶ್ರೇಣಿಯಿಂದ ಹರಿದು ಬರುವ ತೊರೆಗಳು ಮತ್ತು ನದಿಗಳ ನೀರಿನಿಂದ ಹಲವು ಮನೆ ಹಾಗೂ ವಾಹನಗಳು ಕೊಚ್ಚಿಕೊಂಡು ಹೋಗಿವೆ. ಹಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಮನೂನಿ ಖಡ್ ಹೊಳೆಯಲ್ಲಿ ಕನ್ಯಾರಾ ಎಂಬಲ್ಲಿ ನಿರ್ಮಿಸಲಾಗಿದ್ದ ಜಲವಿದ್ಯುತ್ ಯೋಜನೆಯ ತಾತ್ಕಾಲಿಕ ಶೆಡ್ ಗಳಲ್ಲಿ ಕಾರ್ಮಿಕರು ಆಶ್ರಯ ಪಡೆದಿದ್ದರು. ದಿಢೀರ್ ಪ್ರವಾಹವು, ಹರಿವಿಗೆ ಅಡ್ಡಲಾಗಿದ್ದ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ. ಧಾರಾಕಾರ ಮಳೆ ಹಾಗೂ ಪ್ರವಾಹ, ಕಣಿವೆಯುದ್ದಕ್ಕೂ ವ್ಯಾಪಕ ಹಾನಿ ಮಾಡಿರುವುದು ಹಾಗೂ ಮರಮುಟ್ಟುಗಳು ಮತ್ತು ನದಿದಂಡೆಯ ಮನೆಮಠಗಳ ಅವಶೇಷಗಳು ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೊಗಳು ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ.
"ದೇಹಗಳನ್ನು ಗುರುತಿಸಿಲ್ಲ. ಅಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಕಾರ್ಮಿಕರ ಹೆಸರುಗಳನ್ನು ಕಳುಹಿಸುವಂತೆ ಖಾಸಗಿ ಗುತ್ತಿಗೆದಾರನಿಗೆ ಸೂಚಿಸಲಾಗಿದೆ. ರಕ್ಷಣಾ ತಂಡ ಪರಿಹಾರ ಕಾರ್ಯ ಕೈಗೊಂಡಿದೆ" ಎಂದು ಕಾಂಗ್ರಾ ಡಿಸಿ ಹೇಮ್ ರಾಜ್ ಭೈರವ ಹೇಳಿದ್ದಾರೆ. ಮೃತರ ಹೆಸರುಗಳು ದೃಢಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕುಲು ಜಿಲ್ಲೆಯಲ್ಲೂ ಪ್ರವಾಹದಿಂದ ವ್ಯಾಪಕ ಹಾನಿ ಉಂಟಾಗಿದೆ. ಐಲಾ ಭಿಹಾಲ್ ಗ್ರಾಮದಲ್ಲಿ ಐದು ಮನೆಗಳು ಕೊಚ್ಚಿಕೊಂಡು ಹೋಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ. ಪ್ರವಾಹದ ನೀರಿನಿಂದ ಪಾರ್ವತಿ ಜಲವಿದ್ಯುತ್ ಯೋಜನೆಗೆ ಭಾಗಶಃ ಹಾನಿಯಾಗಿದೆ.