ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಮರಾಠಿ ಕಲಿಯಬೇಕು: ಸಿಎಂ ದೇವೇಂದ್ರ ಫಡ್ನಾವಿಸ್
ಸಿಎಂ ದೇವೇಂದ್ರ ಫಡ್ನಾವಿಸ್ | PTI
ಮುಂಬೈ: ದೇಶದಲ್ಲಿ ನಡೆಯುತ್ತಿರುವ ಭಾಷಾ ವಿವಾದದ ನಡುವೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಮರಾಠಿ ರಾಜ್ಯದ ಅಧಿಕೃತ ಭಾಷೆ. ರಾಜ್ಯದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರು ಮರಾಠಿಯನ್ನು ಕಲಿಯಬೇಕು ಎಂದು ವಿಧಾನ ಸಭೆಯಲ್ಲಿ ದೃಢವಾಗಿ ಪ್ರತಿಪಾದಿಸಿದ್ದಾರೆ.
ಭಾಷೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, ಮರಾಠಿ ರಾಜ್ಯದ ಸಂಸ್ಕೃತಿ ಹಾಗೂ ಅನನ್ಯತೆಯ ಅಂತರ್ಗತ ಭಾಗ. ಮರಾಠಿ ಕಲಿಯುವುದು ಹಾಗೂ ಅದಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದಿದ್ದಾರೆ.
‘‘ಪ್ರತಿಯೊಬ್ಬರೂ ಮರಾಠಿ ತಿಳಿದಿರುವುದು ಅನಿವಾರ್ಯವಲ್ಲ’’ ಎಂದು ಆರ್‌ಎಸ್‌ಎಸ್‌ನ ಹಿರಿಯ ನಾಯಕ ಭಯ್ಯಾಜಿ ಜೋಶಿ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ದೇವೇಂದ್ರ ಫಡ್ನಾವಿಸ್ ಈ ಹೇಳಿಕೆ ನೀಡಿದ್ದಾರೆ.
ಸ್ಥಳೀಯ ಭಾಷೆಗೆ ಉತ್ತೇಜನ ನೀಡಲು ಐಸಿಎಸ್‌ಇ ಹಾಗೂ ಸಿಬಿಎಸ್‌ಇಯೊಂದಿಗೆ ಸಂಯೋಜಿತ ಪ್ರಾಥಮಿಕ ಹಾಗೂ ಸೆಕೆಂಡರಿ ಶಾಲೆಗಳಲ್ಲಿ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರ ಮರಾಠಿ ಕಡ್ಡಾಯಗೊಳಿಸಿದ ಸಂದರ್ಭ ಭಯ್ಯಾಜಿ ಜೋಶಿ ಅವರು ಈ ಹೇಳಿಕೆ ನೀಡಿದ್ದರು.
ಶಿವಸೇನೆ ಹಾಗೂ ರಾಜ್ ಠಾಕ್ರೆ ಅವರ ಎಂಎನ್‌ಎಸ್‌ನಂತಹ ರಾಜಕೀಯ ಪಕ್ಷಗಳು ದಿನನಿತ್ಯದ ವ್ಯವಹಾರದಲ್ಲಿ ಮರಾಠಿ ಬಳಿಸುವಂತೆ ತೀವ್ರವಾಗಿ ಒತ್ತಾಯಿಸುತ್ತಿವೆ.
ದೇವೇಂದ್ರ ಫಡ್ನಾವಿಸ್ ಅವರ ಹೇಳಿಕೆ ಪ್ರಮುಖ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಹಲವರು ರಾಜ್ಯದ ಭಾಷಾ ನೀತಿಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಸರಕಾರದ ನಿಲುವನ್ನು ಸ್ಪಷ್ಟಗೊಳಿಸುವಂತೆ ಆಗ್ರಹಿಸಿದ್ದಾರೆ. ಶಾಸಕ ಭಾಸ್ಕರ್ ಝಾಧವ್ ಮರಾಠಿಗೆ ಸಂಬಂಧಿಸಿ ಸರಕಾರದ ನಿಲುವಿನ ಕುರಿತ ಪ್ರತಿಕ್ರಿಯಿಸುವಂತೆ ಕೋರಿದ್ದಾರೆ.
ಇದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಫಡ್ನಾವಿಸ್, ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಪ್ರಥಮ ಭಾಷೆ ಮಾರಾಠಿ ಎಂಬ ಬಗ್ಗೆ ರಾಜ್ಯ ಸರಕಾರದ ನಿಲುವು ಅಚಲವಾಗಿದೆ. ಈ ವಿಷಯದ ಕುರಿತಂತೆ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.