ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ತುರ್ತು ಪರಿಸ್ಥಿತಿ ಹೇರುತ್ತಾ? ಆನ್‌ಲೈನ್ ಸಮೀಕ್ಷೆ ನಡೆಸಿ ಮುಖಭಂಗ ಅನುಭವಿಸಿದ ಬಿಜೆಪಿ!
Photo | X
ಹೊಸದಿಲ್ಲಿ : ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ನಡೆಸಿದ ಆನ್‌ಲೈನ್ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ. 70ಕ್ಕೂ ಅಧಿಕ ಜನರು ಕಾಂಗ್ರೆಸ್ ಅಧಿಕಾರಕ್ಕೆ ಮರಳಿದರೆ ತುರ್ತು ಪರಿಸ್ಥಿತಿಯನ್ನು ಮತ್ತೆ ಹೇರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿ 50 ವರ್ಷವಾದ ಹಿನ್ನೆಲೆ ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆ @BJP4Indiaದಲ್ಲಿ ಜೂನ್ 25ರ ಬುಧವಾರ ಸಂಜೆ 6.53ಕ್ಕೆ ಸಮೀಕ್ಷೆಯನ್ನು ಪ್ರಾರಂಭಿಸಿತು. ಜೂನ್ 26ರ ಗುರುವಾರ ಮಧ್ಯಾಹ್ನ 12.30ರವರೆಗೆ ಸಮೀಕ್ಷೆಯು 23,756 ಮತಗಳನ್ನು ಪಡೆದಿತ್ತು. ಅದರಲ್ಲಿ ಶೇ.70.9ರಷ್ಟು ಜನ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದರೆ ತುರ್ತು ಪರಿಸ್ಥಿತಿ ಮತ್ತೆ ಹೇರುತ್ತದೆ ಎಂಬುದನ್ನು ನಾವು ನಂಬುವುದಿಲ್ಲ ಎಂದು ಹೇಳಿದ್ದಾರೆ. ಶೇ.29.1ರಷ್ಟು ಜನರು ಮಾತ್ರ ನಂಬಿದ್ದೇವೆ ಎಂದು ಹೇಳಿದ್ದಾರೆ.
50 ವರ್ಷಗಳ ಹಿಂದೆ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿಕೆ ಮೂಲಕ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದೆ ಎಂದು ಬಿಜೆಪಿ ಹೇಳಿದೆ. ಬಿಜೆಪಿಯ ಈ ನಿರೂಪಣೆಯನ್ನು ವಿಫಲಗೊಳಿಸಲು ಕಾಂಗ್ರೆಸ್ ಪ್ರಯತ್ನಿಸಿತ್ತು.
ಎಕ್ಸ್‌ನಲ್ಲಿ ನಡೆದ ಸಮೀಕ್ಷೆಯ ಕೆಳಗೆ ಹಲವರು ಮೋದಿಯ ಚಿತ್ರದೊಂದಿಗೆ, ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗದ ಮೇಲಿನ ದಾಳಿಗಳು, ಮಾಧ್ಯಮ ನಿಯಂತ್ರಣ, ದ್ವೇಷ ಭಾಷಣಗಳು, ದಲಿತರು, ಹಿಂದುಳಿದ ವರ್ಗಗಳು, ಮುಸ್ಲಿಮರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು, ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ, ನಿರುದ್ಯೋಗ, ಹಣದುಬ್ಬರ, ನೋಟು ರದ್ದತಿ, ಚುನಾವಣಾ ವಂಚನೆಗಳು "ನಿಜವಾದ ತುರ್ತುಸ್ಥಿತಿ" ಎಂದು ಬರೆದಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂವಿಧಾನ ಹತ್ಯಾ ದಿವಸ್ ಬಿಜೆಪಿ ಆಡಳಿತದಲ್ಲಿ ದೇಶವನ್ನು ಕಾಡುತ್ತಿರುವ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿದೆ ಎಂದು ಹೇಳಿದ್ದರು.
ಇದಲ್ಲದೆ ಬುಧವಾರ ಕೇಂದ್ರ ಸಚಿವ ಸಂಪುಟ ತುರ್ತು ಪರಿಸ್ಥಿತಿಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ. ʼ2025ರಲ್ಲಿ ಸಂವಿಧಾನ ಹತ್ಯಾ ದಿನಕ್ಕೆ 50 ವರ್ಷ ತುಂಬುತ್ತದೆ. ಇದು ಭಾರತದ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯವಾಗಿದೆ. ಅಂದು ಸಂವಿಧಾನವನ್ನು ಬುಡಮೇಲುಗೊಳಿಸಲಾಯಿತು. ಭಾರತದ ಗಣರಾಜ್ಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ದಾಳಿ ನಡೆಸಲಾಯಿತು. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಯಿತು ಹಾಗೂ ಮೂಲಭೂತ ಹಕ್ಕುಗಳು, ಮಾನವ ಸ್ವಾತಂತ್ರ್ಯ ಮತ್ತು ಘನತೆಯನ್ನು ಅಮಾನತಿನಲ್ಲಿಡಲಾಯಿತುʼ ಎಂದು ನಿರ್ಣಯದಲ್ಲಿ ಹೇಳಲಾಗಿತ್ತು.