ಉತ್ತರ ಪ್ರದೇಶ | ಪುತ್ರಿಯನ್ನು ಅಪಹರಿಸುತ್ತಿದ್ದಾಗ ರಕ್ಷಿಸಲು ಮುಂದಾಗಿದ್ದ ದಲಿತ ಮಹಿಳೆಯ ಹತ್ಯೆ; ಗ್ರಾಮಕ್ಕೆ ಪೊಲೀಸ್ ಭದ್ರತೆ
ಸಾಂದರ್ಭಿಕ ಚಿತ್ರ | Photo Credit ; PTI
ಮೀರತ್: ಮೇಲ್ಜಾತಿಯ ಯುವಕನೋರ್ವ ತನ್ನ ಪುತ್ರಿಯನ್ನು ಅಪಹರಿಸುತ್ತಿದ್ದಾಗ ಆಕೆಯನ್ನು ರಕ್ಷಿಸಲು ಯತ್ನಿಸಿದ್ದ ದಲಿತ ಮಹಿಳೆಯೊಬ್ಬರನ್ನು ಕೊಲೆ ಮಾಡಲಾಗಿದ್ದು, ಇಡೀ ಗ್ರಾಮವನ್ನು ಪೋಲಿಸರು ಸುತ್ತುವರಿದಿದ್ದಾರೆ ಎಂದು telegraphindia.com ವರದಿ ಮಾಡಿದೆ.
ಸುನೀತಾ ದೇವಿ (50) ಮೃತ ಮಹಿಳೆಯಾಗಿದ್ದು, ಅವರ ಪುತ್ರಿ 20ರ ಹರೆಯದ ರೂಬಿ ಕುಮಾರಿಯನ್ನು ಅಪಹರಿಸಲಾಗಿದೆ.
ಘಟನೆಯು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದ್ದು, ಆರೋಪಿಯನ್ನು ಬಂಧಿಸಿ ತನ್ನ ಮಗಳನ್ನು ಸುರಕ್ಷಿತವಾಗಿ ಮನೆಗೆ ಮರಳಿ ಕರೆತರುವವರೆಗೆ ಪತ್ನಿಯ ಅಂತ್ಯಸಂಸ್ಕಾರ ನಡೆಸಲು ಮೃತಳ ಪತಿ ಸತ್ಯೇಂದ್ರ ಕುಮಾರ ನಿರಾಕರಿಸಿದ್ದಾರೆ.
ಪೋಲಿಸರ ಪ್ರಕಾರ ಸರ್ಧಾನಾದ ಕಪ್ಸಾಡ್ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
ಸುನೀತಾ ದೇವಿ ಪುತ್ರಿಯೊಂದಿಗೆ ತನ್ನ ಪುತ್ರಿಯೊಂದಿಗೆ ಹೊಲಕ್ಕೆ ತೆರಳುತ್ತಿದ್ದಾಗ ಆರೋಪಿ ಪರಸ್ ಸಿಂಗ್ (25) ಅವರನ್ನು ತಡೆದಿದ್ದ. ಪರಸ್ ಮತ್ತು ಆತನ ಮೂವರು ಸ್ನೇಹಿತರು ರೂಬಿಯನ್ನು ಬಲವಂತದಿಂದ ಎಳೆದೊಯ್ಯುತ್ತಿದ್ದಾಗ ಸುನೀತಾ ದೇವಿ ಅದನ್ನು ತಡೆಯಲು ಯತ್ನಿಸಿದ್ದಳು. ಪರಸ್ ಕೊಡಲಿಯಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸತ್ಯೇಂದ್ರ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತಲೆ ಮತ್ತು ಕುತ್ತಿಗೆಗೆ ತೀವ್ರವಾಗಿ ಗಾಯಗೊಂಡಿದ್ದ ಸುನೀತಾ ದೇವಿ ಅದೇ ದಿನ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಪ್ರತ್ಯಕ್ಷದರ್ಶಿಗಳು ಪರಸ್‌ನ ಸ್ನೇಹಿತರಲ್ಲೋರ್ವನನ್ನು ಸುನಿಲ್ ಕುಮಾರ್ ಎಂದು ಗುರುತಿಸಿದ್ದಾರೆ. ಉಳಿದ ಇಬ್ಬರು ಯಾರು ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ರೂಬಿಯ ಹಿರಿಯ ಸೋದರ ಮಂದೀಪ ಕುಮಾರ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಪೋಲಿಸರು ಪರಸ್,ಸುನಿಲ್ ಕುಮಾರ್ ಮತ್ತು ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯ ಎಸ್‌ಪಿ ಶಾಸಕ ಅತುಲ್ ಪ್ರಧಾನ ಸೇರಿದಂತೆ ಹಲವಾರು ಪ್ರತಿಪಕ್ಷ ನಾಯಕರು ಶುಕ್ರವಾರ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ತೆರಳಿದ್ದರು. ಆದರೆ ಪೋಲಿಸರು ತಡೆದ ಬಳಿಕ ಗ್ರಾಮದ ಹೊರಗೆ ಪ್ರತಿಭಟನೆ ನಡೆಸಿದರು.
‘ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಹಾಗೂ ಮೃತ ಮಹಿಳೆಯ ಅಂತ್ಯಸಂಸ್ಕಾರ ನಡೆಸುವಂತೆ ಕುಟುಂಬದ ಮನವೊಲಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಕುಟುಂಬಕ್ಕೆ ರಕ್ಷಣೆ ಒದಗಿಸಿದ್ದು, ಯುವತಿಯನ್ನು ಪತ್ತೆ ಹಚ್ಚಲು ಮತ್ತು ಆರೋಪಿಗಳನ್ನು ಬಂಧಿಸಲು ಪೋಲಿಸ್ ತಂಡಗಳು ಪ್ರಯತ್ನಿಸುತ್ತಿವೆ’ ಎಂದು ಮೀರತ್ ಗ್ರಾಮೀಣ ಎಸ್‌ಪಿ ಅಭಿಜಿತ ಕುಮಾರ ಸುದ್ದಿಗಾರರಿಗೆ ತಿಳಿಸಿದರು.
ಪರಸ್ ಮತ್ತು ರೂಬಿ ನಡುವೆ ಸಂಬಂಧವಿತ್ತು ಎಂದು ಸಾಬೀತುಗೊಳಿಸಲು ಪ್ರಯತ್ನಿಸುವ ಮೂಲಕ ಪೋಲಿಸರು ಲಕ್ನೋದಲ್ಲಿಯ ತಮ್ಮ ಮೇಲಾಧಿಕಾರಿಗಳನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಕುಟುಂಬ ಸದಸ್ಯರೋರ್ವರು, ಇದು ಸಂಪೂರ್ಣ ಸುಳ್ಳು, ನಿಜವೇನೆಂದರೆ ಕೆಲವು ತಿಂಗಳುಗಳ ಹಿಂದೆ ಪರಸ್ ರೂಬಿಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದ ಮತ್ತು ಆಕೆ ಈ ಬಗ್ಗೆ ತನ್ನ ಪೋಷಕರ ಬಳಿ ದೂರಿಕೊಂಡಿದ್ದಳು. ಪೋಷಕರು ಸ್ಥಳೀಯ ಪಂಚಾಯತ್‌ನ ಮೆಟ್ಟಿಲೇರಿದ್ದು, ಪ್ರಕರಣವನ್ನು ದಾಖಲಿಸದಂತೆ ರೂಬಿಗೆ ಸೂಚಿಸಿದ್ದ ಅದು, ಆಕೆಯ ಕುಟುಂಬಕ್ಕೆ 50,000 ರೂ.ದಂಡ ಪಾವತಿಸುವಂತೆ ಪರಸ್‌ಗೆ ಆದೇಶಿಸಿತ್ತು ಎಂದರು.
ಆರೋಪಿಗಳು ಪ್ರಬಲ ಜಾತಿಗೆ ಸೇರಿದವರಾಗಿದ್ದು, ಆಡಳಿತ ಪಕ್ಷಕ್ಕೆ ಹತ್ತಿರವಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರವು ವಿಳಂಬಿಸುತ್ತಿದೆ ಎಂದು ಪ್ರಧಾನ ಆರೋಪಿಸಿದರು.