×
Ad

ಹಕ್ಕುಸ್ವಾಮ್ಯ ಉಲ್ಲಂಘನೆ: ಭಾರತೀಯ ಟಿವಿ ಮಾಧ್ಯಮಗಳ ಯೂಟ್ಯೂಬ್ ಚಾನೆಲ್‌‌ಗಳಿಂದ ವಿಡಿಯೋಗಳು ಡಿಲಿಟ್

Update: 2024-01-06 17:50 IST

Photo: newslaundry.com

ಹೊಸದಿಲ್ಲಿ: ಹಕ್ಕುಸ್ವಾಮ್ಯ ಉಲ್ಲಂಘನೆ ದಾಳಿಗಳ ಬಳಿಕ ಹಲವಾರು ಭಾರತೀಯ ಸುದ್ದಿ ವಾಹಿನಿಗಳು ದಂಡನೆಗಳಿಂದ ಪಾರಾಗಲು ಕಳೆದ ಕೆಲವು ದಿನಗಳಿಂದ ಯೂಟ್ಯೂಬ್‌ನಲ್ಲಿಯ ತಮ್ಮ ಸಾವಿರಾರು ವೀಡಿಯೊಗಳನ್ನು ಅಳಿಸಿವೆ. ಈ ಪೈಕಿ ಹೆಚ್ಚಿನ ವೀಡಿಯೊಗಳು ವಿಶ್ವಾದ್ಯಂತದ ನೈಸರ್ಗಿಕ ಪ್ರಕೋಪಗಳ ದೃಶ್ಯಾವಳಿಗಳನ್ನು ಒಳಗೊಂಡಿದ್ದವು. ಹಕ್ಕುಸ್ವಾಮ್ಯ ಉಲ್ಲಂಘನೆ ದಾಳಿಯು ಕೃತಿಸ್ವಾಮ್ಯ ಹೊಂದಿರುವ ವಿಷಯವನ್ನು ತೆಗೆದುಹಾಕುವ ಕಾನೂನು ಪ್ರಕ್ರಿಯೆಯಾಗಿದೆ ಎಂದು newslaundry.com ವರದಿ ಮಾಡಿದೆ.

ಹವಾಮಾನ ಛಾಯಾಚಿತ್ರಗ್ರಾಹಕ ಬ್ರಾಂಡನ್ ಕ್ಲೆಮೆಂಟ್ ಅವರ ಭಾಗಶಃ ಒಡೆತನದ ಡಿಜಿಟಲ್ ಹಕ್ಕುಗಳ ನಿರ್ವಹಣೆ ಕಂಪನಿ ಅಮೆರಿಕದ ವೈರಲ್ ಡಿಆರ್‌ಎಂ ಡಿಜಿಟಲ್ ಮಿಲೇನಿಯಂ ಕಾಪಿರೈಟ್ ಆ್ಯಕ್ಟ್‌ನಡಿ ಟೇಕ್‌ಡೌನ್ ನೋಟಿಸ್‌ಗಳನ್ನು ಹೊರಡಿಸಿದ ಬಳಿಕ ಈ ತಿಂಗಳ ಆರಂಭದಲ್ಲಿ ಈ ದಾಳಿಗಳು ಆರಂಭಗೊಂಡಿವೆ. ಹಲವಾರು ವಾಹಿನಿಗಳು ತನಗೆ ಸಲ್ಲಿಸಿರುವ ಉತ್ತರಗಳು ಅತೃಪ್ತಿದಾಯಕವಾಗಿವೆ ಎಂದು ಹೇಳಿರುವ ಕಂಪನಿಯು ಕಳೆದ ವಾರ ಅಮೆರಿಕದ ಹಕ್ಕುಸ್ವಾಮ್ಯ ಕಾನೂನಿನಡಿ ನಷ್ಟ ಪರಿಹಾರವನ್ನು ಕೋರಿ ಕ್ಯಾಲಿಫೋರ್ನಿಯಾದಲ್ಲಿನ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನೂ ದಾಖಲಿಸಿದೆ.

ದಂಡವನ್ನು ತಪ್ಪಿಸಿಕೊಳ್ಳಲು ʼನ್ಯೂಸ್ ನೇಷನ್ʼ ಸುದ್ದಿವಾಹಿನಿಯು 51,000ಕ್ಕೂ ಅಧಿಕ ವೀಡಿಯೊಗಳನ್ನು ಅಳಿಸುವ ಮೂಲಕ ಸಿಂಹಪಾಲನ್ನು ಹೊಂದಿದೆ ಎಂದು ಕ್ಲೆಮೆಂಟ್ ಆರೋಪಿಸಿದ್ದಾರೆ. ಡಿ.29ರಂದು ತನ್ನ ಖಾತೆಯ ಕಾರ್ಯಾಚರಣೆಗಳು ಮರುಸಕ್ರಿಯಗೊಳ್ಳುವವರೆಗೆ ಎರಡು ವಾರಗಳ ಕಾಲ ಯಾವುದೇ ವಿಷಯವನ್ನು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲು ನ್ಯೂಸ್ ನೇಷನ್‌ಗೆ ಸಾಧ್ಯವಾಗಿರಲಿಲ್ಲ.

ಈ ನಡುವೆ ಅಮೆರಿಕದಲ್ಲಿ ಯಾವುದೇ ಕಾನೂನು ಪ್ರಕ್ರಿಯೆಯ ವಿರುದ್ಧ ತಡೆಯಾಜ್ಞೆ ಕೋರಿ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿರುವ ನ್ಯೂಸ್ ನೇಷನ್, ಪ್ರಚಲಿತ ವಿದ್ಯಮಾನಗಳ ಕುರಿತು ವರದಿ ಮಾಡಲು ಹಕ್ಕುಸ್ವಾಮ್ಯ ಹೊಂದಿರುವ ವಿಷಯಗಳ ಬಳಕೆಗೆ ಸಂಬಂಧಿಸಿದ ಕಾಪಿರೈಟ್ ಕಾನೂನಿನಲ್ಲಿಯ ನ್ಯಾಯೋಚಿತ ಬಳಕೆ ವಿನಾಯಿತಿ ಅಡಿಯಲ್ಲಿ ತಾನು ವೀಡಿಯೊ ದೃಶ್ಯಾವಳಿಗಳನ್ನು ಬಳಸಿರುವುದರಿಂದ ಹಕ್ಕುಸ್ವಾಮ್ಯ ದಾಳಿಗಳು ಅನ್ಯಾಯವಾಗಿವೆ ಎಂದು ವಾದಿಸಿದೆ.

ಇತರ ಎರಡು ಸುದ್ದಿವಾಹಿನಿಗಳಾದ ಟಿವಿ9 ಭಾರತವರ್ಷ ಮತ್ತು ಝೀ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ಗಳನ್ನೂ ಹಕ್ಕುಸ್ಯಾಮ್ಯ ಉಲ್ಲಂಘನೆ ಆರೋಪದಲ್ಲಿ ನಿಷ್ಕ್ರಿಯಗೊಳಿಸಲಾಗಿತ್ತು. ಅನುಕ್ರಮವಾಗಿ ಎಂಟು ಮತ್ತು ಆರು ದಿನಗಳ ಬಳಿಕವೇ ಅವುಗಳಿಗೆ ತಮ್ಮ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗಿತ್ತು. ಇವೆರಡೂ ವಾಹಿನಿಗಳು ಕನಿಷ್ಠ ಎಂಟು ಮತ್ತು ಆರು ಸಂದರ್ಭಗಳಲ್ಲಿ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿವೆ ಎಂದು ಕ್ಲೆಮೆಂಟ್ ದಾಖಲಿಸಿರುವ ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.

ನಾಲ್ಕು ಸಂದರ್ಭಗಳಲ್ಲಿ ಕೃತಿಸ್ವಾಮ್ಯವನ್ನು ಉಲ್ಲಂಘಿಸಿರುವ ಆರೋಪವನ್ನು ಎದುರಿಸುತ್ತಿರುವ ಸುದ್ದಿ ಜಾಲತಾಣ ಕ್ವಿಂಟ್ ಹಿಂದಿಯ ಯೂಟ್ಯೂಬ್ ಚಾನೆಲ್‌ನ್ನು ಅಮಾನತುಗೊಳಿಸಲಾಗಿದೆ.

ವೈರಲ್ ಡಿಆರ್‌ಎಂ ಇಂಡಿಯಾ ಟಿವಿ,ಟೈಮ್ಸ್ ನೌ ನವಭಾರತ ಮತ್ತು ನ್ಯೂಸ್ 18 ಇಂಡಿಯಾ ವಿರುದ್ಧವೂ ಹಕ್ಕುಸ್ವಾಮ್ಯ ಉಲ್ಲಂಘನೆ ದಾಳಿಗಳನ್ನು ಆರಂಭಿಸಿದೆ. ದೂರಿನಲ್ಲಿ ಟಿವಿ9 ತೆಲುಗು, ಕಳಿಂಗ ಟಿವಿ, ಮನೋರಮಾ ನ್ಯೂಸ್ ಮತ್ತಿತರ ವಾಹಿನಿಗಳನ್ನೂ ಹೆಸರಿಸಲಾಗಿದೆ.

ಝೀ ನ್ಯೂಸ್ ಸುಮಾರು 16,000 ಮತ್ತು ಇಂಡಿಯಾ ಟಿವಿ ಸುಮಾರು 4,000 ವೀಡಿಯೊಗಳನ್ನು ಅಳಿಸಿವೆ ಎಂದೂ ಮೊಕದ್ದಮೆಯಲ್ಲಿ ತಿಳಿಸಲಾಗಿದೆ.

ಈ ವಾಹಿನಿಗಳು ತನ್ನ ಹಕ್ಕುಸ್ವಾಮ್ಯದ ವೀಡಿಯೊಗಳನ್ನು ಯೂಟ್ಯೂಬ್‌ನಿಂದ ಡೌನ್‌ಲೋಡ್ ಮಾಡಿಕೊಂಡಿದ್ದವು ಮತ್ತು ನಕಲು ಮಾಡಿದ್ದವು, ತನ್ನ ಹಕ್ಕುಸ್ವಾಮ್ಯನಿರ್ವಹಣೆ ಮಾಹಿತಿಯನ್ನು ತೆಗೆದುಹಾಕಲು ಅವುಗಳನ್ನು ಎಡಿಟ್ ಮಾಡಿದ್ದವು ಮತ್ತು ಬಳಿಕ ಹೊಸ ಆವೃತ್ತಿಗಳನ್ನು ಅಪ್‌ಲೋಡ್ ಮಾಡಿದ್ದವು ಎಂದು ವೈರಲ್ ಡಿಆರ್‌ಎಂ ಆರೋಪಿಸಿದೆ. ಅವು ಜಾಹೀರಾತುಗಳ ಮೂಲಕ ಆದಾಯ ಗಳಿಸಲು ಮತ್ತು ತಮ್ಮ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಈ ವೀಡಿಯೊಗಳನ್ನು ಬಳಸಿಕೊಂಡಿದ್ದವು ಎಂದೂ ಅದು ದೂಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News