ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟ ಪ್ರಕರಣ : ಕಾಲ್ಡ್ರಿಫ್‌ಗೆ ಪಂಜಾಬ್, ಹಿಮಾಚಲ ಪ್ರದೇಶದಲ್ಲಿ ನಿಷೇಧ
ಸಾಂದರ್ಭಿಕ ಚಿತ್ರ | Photo Credit : freepik.com
ಚಂಡಿಗಢ, ಅ. 7: ಕಾಲ್ಡ್ರಿಫ್ ಕೆಮ್ಮಿನ ಸಿರಪ್‌ನ ಮಾರಾಟ, ವಿತರಣೆ ಹಾಗೂ ಬಳಕೆಗೆ ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ಸರಕಾರಗಳು ನಿಷೇಧ ಹೇರಿವೆ.
ಮಧ್ಯಪ್ರದೇಶದಲ್ಲಿ ಈ ಕೆಮ್ಮಿನ ಸಿರಪ್ ಸೇವಿಸಿದ 14 ಮಕ್ಕಳು ಮೂತ್ರ ಪಿಂಡ ವೈಫಲ್ಯದಿಂದ ಮೃತಪಟ್ಟ ಬಳಿಕ ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ಸರಕಾರಗಳು ಈ ನಿರ್ಧಾರ ತೆಗೆದುಕೊಂಡಿವೆ.
ಪಂಜಾಬ್ ಸರಕಾರದ ಆಹಾರ ಮತ್ತು ಔಷಧಗಳ ಆಡಳಿತ (ಎಫ್‌ಡಿಎ) ಸೋಮವಾರ ಹೊರಡಿಸಿದ ಆದೇಶದಲ್ಲಿ, ‘‘ಕಾಲ್ಡ್ರಿಫ್ ಸಿರಪ್ ಪ್ರಮಾಣಿತ ಗುಣಮಟ್ಟದಲ್ಲಿ ಇಲ್ಲ ಎಂದು ಸರಕಾರಿ ವಿಶ್ಲೇಷಕರು, ಔಷಧ ಪರೀಕ್ಷಾ ಪ್ರಯೋಗಾಲಯ ಮತ್ತು ಮಧ್ಯಪ್ರದೇಶದ ಎಫ್‌ಡಿಎ ಘೋಷಿಸಿರುವುದು ಕಚೇರಿಯ ಗಮನಕ್ಕೆ ಬಂದಿದೆ’’ ಎಂದು ತಿಳಿಸಿದೆ.
‘‘ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಮಕ್ಕಳ ಸಾವಿಗೆ ಹಾಗೂ ಈ ಉತ್ಪನ್ನಕ್ಕೆ ಸಂಬಂಧ ಇದೆ ಎಂದು ಕಂಡು ಬಂದಿದೆ. ಆದ್ದರಿಂದ ಪಂಜಾಬ್‌ನಲ್ಲಿ ಇದರ ಮಾರಾಟ, ವಿತರಣೆ ಹಾಗೂ ಬಳಕೆಯನ್ನು ತತ್‌ಕ್ಷಣ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ’’ ಎಂದು ಪಂಜಾಬ್ ಎಫ್‌ಡಿಎ ಆದೇಶದಲ್ಲಿ ತಿಳಿಸಿದೆ.
ಹಿಮಾಚಲ ಪ್ರದೇಶ ಸರಕಾರ ಕೂಡ ಕಾಲ್ಡ್ರಿಫ್ ಕೆಮ್ಮಿನ ಸಿರಪ್‌ಗೆ ನಿಷೇಧ ವಿಧಿಸಿದೆ.
‘‘ನಾವು ಕಾಲ್ಡ್ರಿಫ್ ಸಿರಪ್‌ಗೆ ಸಂಪೂರ್ಣ ನಿಷೇಧ ವಿಧಿಸಿದ್ದೇವೆ. ಯಾವುದೇ ಸಂದರ್ಭದಲ್ಲೂ ಈ ಔಷಧ ಖರೀದಿಸದಂತೆ ಅಥವಾ ಬಳಸದಂತೆ ಚಿಲ್ಲರೆ ವ್ಯಾಪಾರಿಗಳು, ವಿತರಕರು, ಆಸ್ಪತ್ರೆಗಳು ಹಾಗೂ ವೈದ್ಯರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಈಗಿರುವ ಈ ಔಷಧದ ದಾಸ್ತಾನು ಕುರಿತು ಔಷಧಗಳ ನಿಯಂತ್ರಣ ಆಡಳಿತಕ್ಕೆ ತತ್‌ಕ್ಷಣ ವರದಿ ನೀಡುವಂತೆ ನಿರ್ದೇಶನ ನೀಡಲಾಗಿದೆ’’ ಎಂದು ರಾಜ್ಯ ಔಷಧ ನಿಯಂತ್ರಕ ಮನೀಷ್ ಕಪೂರ್ ತಿಳಿಸಿದ್ದಾರೆ.