ಪಾಕಿಸ್ತಾನದ ಮಹಿಳೆಯ ವಿವಾಹವಾಗಿರುವುದಕ್ಕೆ ಸೇವೆಯಿಂದ ವಜಾ; ಹೈಕೋರ್ಟ್ ಮೆಟ್ಟಿಲೇರಿದ ಸಿಆರ್‌ಪಿಎಫ್ ಯೋಧ
PC : PTI
ಶ್ರೀನಗರ: ಪಾಕಿಸ್ತಾನದ ಮಹಿಳೆಯನ್ನು ವಿವಾಹವಾಗಿರುವುದಕ್ಕೆ ಸೇವೆಯಿಂದ ವಜಾಗೊಂಡಿರುವ ಜಮ್ಮು ಹಾಗೂ ಕಾಶ್ಮೀರದ ಸಿಆರ್‌ಪಿಎಫ್ ಯೋಧ ಮುನೀರ್ ಅಹ್ಮದ್ ತನ್ನನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ಜಮ್ಮು ಹಾಗೂ ಕಾಶ್ಮೀರ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ತನ್ನನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ನ್ಯಾಯವಾದಿ ಅಂಕುರ್ ಶರ್ಮಾ ಅವರ ಮೂಲಕ ಮುನೀರ್ ಅಹ್ಮದ್ ಉಚ್ಚ ನ್ಯಾಯಾಲಯದ ಜಮ್ಮು ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ವಾನಿ ಅವರು ಪ್ರತಿವಾದಿಗಳಾದ ಸಿಆರ್‌ಪಿಎಫ್‌ನ ಪ್ರಧಾನ ನಿರ್ದೇಶಕ, ಭೋಪಾಲ (ಮಧ್ಯಪ್ರದೇಶ)ದ ಬಂಗ್ರಾಸಿಯಾದಲ್ಲಿರುವ ಸಿಆರ್‌ಪಿಎಫ್‌ನ 41 ಬೆಟಾಲಿಯನ್ ಹಾಗೂ ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯ ಸುಂದರ್ಬನಿಯ ಸೊಡ್ರಾದಲ್ಲಿರುವ 72 ಬೆಟಾಲಿಯನ್‌ನ ಕಮಾಂಡೆಂಟ್‌ಗಳಿಗೆ ನೋಟಿಸು ಜಾರಿ ಮಾಡಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕದಂದು ಅಥವಾ ಅದಕ್ಕಿಂತ ಮುನ್ನ ತಮ್ಮ ಆಕ್ಷೇಪಗಳನ್ನು ಸಲ್ಲಿಸುವಂತೆ ಪ್ರತಿವಾದಿಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜೂನ್ 30ರಂದು ನಡೆಯಲಿದೆ.
2017ರಲ್ಲಿ ಸಿಆರ್‌ಪಿಎಫ್ ಗೆ ಸೇರಿದ ಹಾಗೂ ಚತ್ತೀಸ್‌ಗಢ, ಬಿಹಾರ, ಜಮ್ಮು-ಕಾಶ್ಮೀರ ಹಾಗೂ ಮಧ್ಯಪ್ರದೇಶದಲ್ಲಿ ಸೇವೆ ಸಲ್ಲಿಸಿದ ಮುನೀರ್ ಅಹ್ಮದ್ ಅವರನ್ನು ಪಾಕಿಸ್ತಾನಿ ಮಹಿಳೆ ಮೇನಲ್ ಖಾನ್ ಅವರನ್ನು ವಿವಾಹವಾಗಿರುವುದಕ್ಕೆ ಮೇ 2ರಂದು ಸೇವೆಯಿಂದ ವಜಾಗೊಳಿಸಲಾಗಿತ್ತು.
ಪಾಕಿಸ್ತಾನದ ಪ್ರಜೆಯನ್ನು ವಿವಾಹವಾಗುವ ತನ್ನ ಉದ್ದೇಶದ ಕುರಿತು ತಾನು ಸಿಆರ್‌ಪಿಎಫ್‌ನ ಕೇಂದ್ರ ಕಚೇರಿಗೆ ಮಾಹಿತಿ ನೀಡಿದ್ದೆ ಎಂದು ಮುನೀರ್ ಅಹ್ಮದ್ ಪ್ರತಿಪಾದಿಸಿದ್ದಾರೆ.