×
Ad

ಮೀರತ್ ನಲ್ಲಿ ಹೆಲಿಕಾಪ್ಟರ್ ಕದ್ದ ಡಕಾಯಿತರು?

Update: 2024-09-14 08:58 IST

PC: x.com/awanishvidyarth

ಲಕ್ನೋ: ಉತ್ತರ ಪ್ರದೇಶದ ಮೀರತ್ ನಲ್ಲಿ ಹೆಲಿಕಾಪ್ಟರ್ ಡಕಾಯಿತಿ ನಡೆದಿದೆ ಎನ್ನಲಾದ ಅಪರೂಪದ ಘಟನೆ ವರದಿಯಾಗಿದೆ. ಈ ಸಂಬಂಧ ಪೈಲಟ್ ರವೀಂದ್ರ ಸಿಂಗ್ ಅವರು ಹಿರಿಯ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ. 15-20 ಮಂದಿಯ ಗುಂಪು ಬಲವಂತವಾಗಿ ಡಾ.ಭೀಮರಾವ್ ಅಂಬೇಡ್ಕರ್ ಏರ್ ಸ್ಟ್ರಿಪ್ ಗೆ ನುಗ್ಗಿ, ಹಲ್ಲೆ ನಡೆಸಿ, ಹೆಲಿಕಾಪ್ಟರ್ ನ ಬಿಡಿಭಾಗಗಳನ್ನು ಕಳಚಿಕೊಂಡು ಟ್ರಕ್ ನಲ್ಲಿ ತುಂಬಿಕೊಂಡು ಪರಾರಿಯಾದರು ಎಂದು ಹೇಳಿದ್ದಾರೆ.

ಈ ಟ್ರಕ್ ರಾಜಸ್ಥಾನ ನೋಂದಣಿ ಹೊಂದಿದ್ದು, 16 ಟೈರುಗಳ ವಾಹನವಾಗಿದೆ. ಎಸ್ಎಆರ್ ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಉದ್ಯೋಗಿಯಾಗಿರುವ ಸಿಂಗ್ ಈ ಭಯಾನಕ ಘಟನಾವಳಿಯನ್ನು ವಿವರಿಸಿದ್ದಾರೆ. "ಏನೂ ಮಾತನಾಡದೇ ಸುಮ್ಮನೆ ಕುಳಿತಿರಬೇಕು. ತಪ್ಪಿದಲ್ಲಿ ಕಾಲು ಕತ್ತರಿಸುವುದಾಗಿ ಬೆದರಿಕೆ ಹಾಕಿದರು. ಹೆಲಿಕಾಪ್ಟರ್ ಭಾಗಗಳನ್ನು ಕಳಚಿ, ಟ್ರಕ್ ಗೆ ತುಂಬಿಕೊಂಡು ಪರಾರಿಯಾದರು" ಎಂದು ತಿಳಿಸಿದ್ದಾರೆ.

ಈ ಅಸಾಮಾನ್ಯ ಘಟನೆಯ ಸ್ವರೂಪ ಎಲ್ಲರ ಹುಬ್ಬೇರಿಸಿದ್ದು, ಇದು ನಿಜವಾಗಿಯೂ ಕಳ್ಳತನವೇ ಅಥವಾ ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿದ ವ್ಯಾಜ್ಯದ ಹಿನ್ನೆಲೆಯಲ್ಲಿ ಇದನ್ನು ಒಯ್ಯಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ದೂರು ಸ್ವೀಕರಿಸಿರುವುದನ್ನು ಮೀರತ್ ಎಸ್ಎಸ್ ಪಿ ವಿಪಿನ್ ಟಾಡಾ ದೃಢಪಡಿಸಿದ್ದು, ವಿಮಾನಯಾನ ಕಂಪನಿಯ ಇಬ್ಬರು ಪಾಲುದಾರರ ನಡುವಿನ ಅಂತರಾಷ್ಟ್ರೀಯ ವ್ಯವಹಾರ ವ್ಯಾಜ್ಯದ ಪರಿಣಾಮವಾಗಿರಬಹುದು ಎಂದು ಹೇಳಿದ್ದಾರೆ. ಘಟನೆ ನಾಲ್ಕು ತಿಂಗಳ ಹಿಂದೆ ನಡೆದಿದ್ದು, ಮೇಲ್ನೋಟಕ್ಕೆ ಇದು ಇಬ್ಬರು ವ್ಯವಹಾರ ಪಾಲುದಾರರ ನಡುವಿನ ವ್ಯಾಜ್ಯ ಎಂದು ಕಂಡುಬರುತ್ತದೆ. ಬ್ರಹ್ಮಪುರಿ ವೃತ್ತಾಧಿಕಾರಿಗೆ ತನಿಖೆಗಾಗಿ ಪ್ರಕರಣ ವರ್ಗಾಯಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News