ರಾಜಸ್ಥಾನ | ನೀರಿನ ಗಡಿಗೆ ಮುಟ್ಟಿದ್ದಕ್ಕೆ ದಲಿತನನ್ನು ಥಳಿಸಿದ ಇಟ್ಟಿಗೆ ಭಟ್ಟಿ ಮಾಲಕ
ಸಾಂದರ್ಭಿಕ ಚಿತ್ರ
ಜೈಪುರ: ನೀರಿನ ಗಡಿಗೆಯನ್ನು ಮುಟ್ಟಿದ ಎಂದು ದಲಿತ ಸಮುದಾಯಕ್ಕೆ ಸೇರಿದ ಟ್ರ್ಯಾಕ್ಟರ್ ಚಾಲಕನನ್ನು ಇಟ್ಟಿಗೆ ಭಟ್ಟಿ ಮಾಲಕನೊಬ್ಬ ಥಳಿಸಿರುವ ಘಟನೆ ರಾಜಸ್ಥಾನದ ಝುಂಝುವಿನಲ್ಲಿ ನಡೆದಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ, ಆತನನ್ನು ಹರ್ಯಾಣಕ್ಕೆ ಕೊಂಡೊಯ್ದಿರುವ ಆರೋಪಿಯು, ಒತ್ತೆ ಹಣ ನೀಡುವಂತೆ ಆತನ ಕುಟುಂಬದ ಸದಸ್ಯರಿಗೆ ಬೆದರಿಕೆ ಒಡ್ಡಿರುವ ಘಟನೆಯೂ ನಡೆದಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಈ ಘಟನೆ ಶನಿವಾರ ಝುಂಜು ಜಿಲ್ಲೆಯ ಪಚೇರಿ ಕಲನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಇಟ್ಟಿಗೆ ಭಟ್ಟಿಯೊಂದರಲ್ಲಿ ನಡೆದಿದ್ದು, ಟ್ರ್ಯಾಕ್ಟರ್ ಚಾಲಕ ಮೇಘವಾಲ್, ವಿನೋದ್ ಯಾದವ್ ಮಾಲಕತ್ವದ ಇಟ್ಟಿಗೆ ಭಟ್ಟಿಯಿಂದ ಇಟ್ಟಿಗೆಗಳನ್ನು ಸಂಗ್ರಹಿಸಲು ತೆರಳಿದ್ದಾಗ ನಡೆದಿದೆ ಎನ್ನಲಾಗಿದೆ.
ಹಣ ನೀಡಿ ಇಟ್ಟಿಗೆಯನ್ನು ಸಂಗ್ರಹಿಸಿದ ನಂತರ, ಟ್ರ್ಯಾಕ್ಟರ್ ಚಾಲಕ ಮೇಘವಾಲ್ ಗಡಿಗೆಯೊಂದರಿಂದ ನೀರನ್ನು ಕುಡಿಯಲು ಪ್ರಯತ್ನಿಸಿದ್ದಾನೆ. ಆಗ ಇಟ್ಟಿಗೆ ಭಟ್ಟಿಯ ಮಾಲಕ ಆತನಿಗೆ ಒದ್ದಿದ್ದಾನೆ ಎಂದು ಆರೋಪಿಸಲಾಗಿದೆ.
ಇದಾದ ನಂತರ, ಯಾದವ್ ಹಾಗೂ ಇನ್ನಿತರ ಇಬ್ಬರು ಚಾಲಕ ಮೇಘವಾಲ್ ನನ್ನು ಹರ್ಯಾಣದ ರೇವರಿಗೆ ಕಾರಿನಲ್ಲಿ ಕರೆದೊಯ್ದಿದ್ದು, ಆತನಿಗೆ ಬೆಲ್ಟ್ ನಿಂದ ಥಳಿಸಿದ್ದಾನೆ. ಆತನ ಬಿಡುಗಡೆಗೆ ಆತನ ಕುಟುಂಬದ ಸದಸ್ಯರಿಂದ 1.5 ಲಕ್ಷ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮೇಘವಾಲ್ ಸಹೋದರ ಹಣ ನೀಡಿದ ನಂತರ, ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತನ್ನ ದೇಹದ ಮೇಲೆ ಗಾಯದ ಗುರುತುಗಳನ್ನು ಹೊಂದಿದ್ದ ಮೇಘವಾಲ್, ರವಿವಾರ ಈ ಸಂಬಂಧ ದೂರು ದಾಖಲಿಸಿದ್ದಾರೆ. ಅವರಿಗೆ ಪಚೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಸಬ್ ಇನ್ಸ್ ಪೆಕ್ಟರ್ ರಾಜ್ ಪಾಲ್ ಹೇಳಿದ್ದಾರೆ.
ನಾನು ಗಡಿಗೆಯಿಂದ ನೀರು ಕುಡಿಯಲು ಯತ್ನಿಸಿದ್ದರಿಂದ ನನ್ನನ್ನು ಥಳಿಸಲಾಯಿತು ಎಂದು ಮೇಘವಾಲ್ ದೂರು ನೀಡಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ರಾಜ್ ಪಾಲ್ ತಿಳಿಸಿದ್ದಾರೆ. ಅವರನ್ನು ಇನ್ನೂ ಪೊಲೀಸರು ವಿಚಾರಣೆಗೊಳಪಡಿಸಬೇಕಿದೆ.