×
Ad

ಬಸ್‌ನಲ್ಲಿ ನಕ್ಕಿದ್ದಕ್ಕೆ ಮೇಲ್ಜಾತಿಯ ವಿದ್ಯಾರ್ಥಿಗಳಿಂದ ದಲಿತ ವಿದ್ಯಾರ್ಥಿಗೆ ಹಲ್ಲೆ

Update: 2023-08-29 18:26 IST

Photo: thenewsminute.com 

ಚೆನ್ನೈ: ತಮಿಳುನಾಡಿನಲ್ಲಿ ವಿದ್ಯಾರ್ಥಿಗಳ ನಡುವೆ ಜಾತಿ ಆಧಾರಿತ ಹಿಂಸಾಚಾರದ ಇನ್ನೊಂದು ಪ್ರಕರಣ ವರದಿಯಾಗಿದೆ. ಕರೂರು ಜಿಲ್ಲೆಯಲ್ಲಿ ಶನಿವಾರ ಬಸ್‌ನೊಳಗೆ ನಗುತ್ತಿದ್ದಕ್ಕಾಗಿ ದಲಿತ ವಿದ್ಯಾರ್ಥಿ ಮತ್ತು ಆತನ ಅಜ್ಜಿಯ ಮೇಲೆ ಉರಾಳಿ ಗೌಂಡರ್ ಸಮುದಾಯಕ್ಕೆ ಸೇರಿದ 20ಕ್ಕೂ ಅಧಿಕ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಇದು ಕಳೆದ 20 ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಮೂರನೇ ಹಲ್ಲೆ ಪ್ರಕರಣವಾಗಿದೆ ಎಂದು thenewsminute.com ವರದಿ ಮಾಡಿದೆ.

ಹಲ್ಲೆಗೊಳಗಾದ ಕರೂರು ಜಿಲ್ಲೆಯ ಉಪ್ಪಿಡಮಂಗಲಂ ಅಲಿಯಾಗೌಂಡನೂರು ಗ್ರಾಮದ ನಿವಾಸಿ,10ನೇ ತರಗರತಿಯ ವಿದ್ಯಾರ್ಥಿ ಜೀವಾ ಅರುಂತಥಿಯಾರ ಸಮುದಾಯ (ಪರಿಶಿಷ್ಟ ಜಾತಿ)ಕ್ಕೆ ಸೇರಿದ್ದರೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳು ಉರಾಳಿ ಗೌಂಡರ್ ಜಾತಿ (ಹಿಂದುಳಿದ ವರ್ಗ)ಗೆ ಸೇರಿದವರಾಗಿದ್ದಾರೆ.

ಆ.25ರಂದು ಸಂಜೆ ಜೀವಾ ಉಪ್ಪಿಡಮಂಗಲಂ ಸರಕಾರಿ ಪ್ರೌಢಶಾಲೆಯಿಂದ ಸರಕಾರಿ ಬಸ್‌ನಲ್ಲಿ ಮನೆಗೆ ಮರಳುತ್ತಿದ್ದ. ಆತ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾಗ ಪುಲಿಯೂರಿನ ರಾಣಿ ಮೆಯ್ಯಮ್ಮಾಯಿ ಶಾಲೆಯ ಉರಾಳಿ ಗೌಂಡರ್ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಗುಂಪು ಆತನ ಕೆಳಜಾತಿಯನ್ನು ಉಲ್ಲೇಖಿಸಿ ತಮ್ಮನ್ನು ನೋಡಿ ನಗುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದರು. ಇನ್ನು ಮುಂದೆ ಈ ಬಸ್‌ನಲ್ಲಿ ಬಂದರೆ ಥಳಿಸುವುದಾಗಿ ಬೆದರಿಕೆಯೊಡ್ಡಿದ್ದರು. ಆದರೆ ಬೆದರಿಕೆಯನ್ನು ಲೆಕ್ಕಿಸದ ಜೀವಾ ಮರುದಿನವೂ ಅದೇ ಬಸ್‌ನಲ್ಲಿ ಪ್ರಯಾಣಿಸಿದ್ದ ಮತ್ತು ಆ ವಿದ್ಯಾರ್ಥಿಗಳು ಆತನನ್ನು ಥಳಿಸಿದ್ದರು.

ಜೀವಾ ತನ್ನ ಮೇಲೆ ಹಲ್ಲೆ ನಡೆದಿದ್ದನ್ನು ಸೋದರ ಮಾವನಿಗೆ ತಿಳಿಸಿದ್ದು,ಅವರು ಹಲ್ಲೆಕೋರ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದರು. ಇದರಿಂದ ಕೆರಳಿದ ಉರಾಳಿ ಗೌಂಡರ್ ಸಮುದಾಯದ ಸುಮಾರು 20 ವಿದ್ಯಾರ್ಥಿಗಳು ಜೀವಾನ ಮನೆಗೆ ತೆರಳಿ ಆತನಿಗೆ ಮತ್ತು ಆತನ ಅಜ್ಜಿ ಕಾಳಿಯಮ್ಮಾಳ್‌ಗೆ ಹಲ್ಲೆ ನಡೆಸಿದ್ದರು. ಕೆಲವು ವರ್ಷಗಳ ಹಿಂದೆ ಹೆತ್ತವರನ್ನು ಕಳೆದುಕೊಂಡಿರುವ ಜೀವಾ ಅಜ್ಜಿಯೊಂದಿಗೆ ವಾಸವಿದ್ದಾನೆ. ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಅವರಿಬ್ಬರನ್ನೂ ರಕ್ಷಿಸಿ ಕರೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿರುವ ವೆಲ್ಲಿಯನೈ ಪೋಲಿಸರು ಅವರ ವಿರುದ್ದ ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News