‘ಎನ್ಕೌಂಟರ್ ಸ್ಪೆಶಲಿಸ್ಟ್’ ದಯಾನಾಯಕ್ ಎಸಿಪಿಯಾಗಿ ಭಡ್ತಿ
ಹಿರಿಯ ಪೊಲೀಸ್ ನಿರೀಕ್ಷಕ ದಯಾನಾಯಕ್ | PC : X
ಮುಂಬೈ,ಜು.29: ‘ಎನ್ಕೌಂಟರ್ ಸ್ಪೆಶಲಿಸ್ಟ್’ ಎಂದೇ ಖ್ಯಾತಿ ಪಡೆದ ಹಿರಿಯ ಪೊಲೀಸ್ ನಿರೀಕ್ಷಕ ದಯಾನಾಯಕ್ ಅವರನ್ನು ಸಹಾಯಕ ಪೊಲೀಸ್ ಆಯುಕ್ತ ದರ್ಜೆಗೆ ಮಹಾರಾಷ್ಟ್ರ ಸರಕಾರ ಮಂಗಳವಾರ ಭಡ್ತಿಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿರಿಯ ನಿರೀಕ್ಷಕರಾದ ಜೀವನ್ ಖಾರಟ್, ದೀಪಕ್ ದಲ್ವಿ ಹಾಗೂ ಪಾಂಡುರಂಗ ಪವಾರ್ ಅವರನ್ನು ಕೂಡಾ ಸಹಾಯಕ ಪೊಲೀಸ್ ಆಯುಕ್ತರಾಗಿ ಭಡ್ತಿಗೊಳಿಸಲಾಗಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ದಯಾನಾಯಕ್ ಅವರು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರು. 1995ರಲ್ಲಿ ಮುಂಬೈ ಪೊಲೀಸ್ ಪಡೆಗೆ ಸೇರ್ಪಡೆಗೊಂಡಿದ್ದರು. ಪ್ರಸಕ್ತ ಅವರು ಮುಂಬೈ ಕ್ರೈಂ ಬಾಂಚ್ ನ ಬಾಂದ್ರಾ ಘಟಕದಲ್ಲಿ ನಿಯೋಜಿತರಾಗಿದ್ದಾರೆ. 1990ರ ದಶಕದಲ್ಲಿ ಹಲವಾರು ಗ್ಯಾಂಗ್ಸ್ಟರ್ ಗಳನ್ನು ಎನ್ ಕೌಂಟರ್ ನಡೆಸಿ ಹೆಸರು ಗಳಿಸಿದ್ದರು. 2006ರಲ್ಲಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹದಳವು ಆದಾಯ ಮೀರಿದ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿತ್ತು. ಆನಂತರ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹದಳದಲ್ಲಿಯೂ ಅವರು ಸೇವೆ ಸಲ್ಲಿಸಿದ್ದರು.