ಎನ್ ಡಿಟಿವಿ ಸಾಲ ಮರುಪಾವತಿ ಪ್ರಕರಣ: ಸಿಬಿಐ ಸಲ್ಲಿಸಿದ ಮುಕ್ತಾಯ ವರದಿ ಸ್ವೀಕರಿಸಿದ ನ್ಯಾಯಾಲಯ
Photo | PTI
ಹೊಸದಿಲ್ಲಿ: ಎನ್ ಡಿಟಿವಿ ಮಾಧ್ಯಮ ಸಂಸ್ಥೆಯಿಂದ ಸಾಲ ಮರುಪಾವತಿ ಸ್ವೀಕರಿಸುವಲ್ಲಿ ಐಸಿಐಸಿಐ ಬ್ಯಾಂಕ್ ಅಕ್ರಮ ಆರೋಪದ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಮುಕ್ತಾಯ ವರದಿಯನ್ನು ತೃಪ್ತಿಕರವಾಗಿದೆ ಎಂದು ದಿಲ್ಲಿ ನ್ಯಾಯಾಲಯ ಗುರುವಾರ ಅಂಗೀಕರಿಸಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶೈಲೇಂದರ್ ಮಲಿಕ್ ಅವರು ಸಿಬಿಐ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ನಂತರ ಮುಕ್ತಾಯದ ವರದಿಯನ್ನು ಸ್ವೀಕರಿಸಿದ್ದಾರೆ. ಪ್ರಕರಣದ ದೂರುದಾರರು, ತನಿಖೆಯಿಂದ ತೃಪ್ತರಾಗಿದ್ದು, ಯಾವುದೇ ತಕರಾರು ಅರ್ಜಿ ಸಲ್ಲಿಸಲು ಬಯಸದ ಕಾರಣ ಮುಕ್ತಾಯದ ವರದಿಯನ್ನು ನ್ಯಾಯಾಲಯ ಸ್ವೀಕರಿಸಿದೆ.
ಐಸಿಐಸಿಐ ಬ್ಯಾಂಕ್ ಮತ್ತು ಎನ್ ಡಿಟಿವಿ ಪ್ರವರ್ತಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ನಡುವಿನ ವಹಿವಾಟಿನಲ್ಲಿ ಯಾವುದೇ ಅಕ್ರಮಗಳು ಕಂಡುಬಂದಿಲ್ಲ ಎಂದು ಆರು ವರ್ಷಗಳ ಸುದೀರ್ಘ ತನಿಖೆಯ ನಂತರ ಸಿಬಿಐ ಕಳೆದ ವರ್ಷ ವಿಶೇಷ ನ್ಯಾಯಾಲಯಕ್ಕೆ ಮುಕ್ತಾಯದ ವರದಿಯನ್ನು ಸಲ್ಲಿಸಿತ್ತು.
ಪ್ರಕರಣದಲ್ಲಿ ಯಾವುದೇ ಸಾರ್ವಜನಿಕ ಸೇವಕ ಅಥವಾ ಐಸಿಐಸಿಐ ಬ್ಯಾಂಕ್ ನ ಅಧಿಕಾರಿಗಳು ಕ್ರಿಮಿನಲ್ ಪಿತೂರಿ ನಡೆಸಿಲ್ಲ ಅಥವಾ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂದು ಸಿಬಿಐ ವರದಿಯಲ್ಲಿ ಉಲ್ಲೇಖಿಸಿತ್ತು.