238 ಬಾರಿ ಸೋತರೂ, ಮತ್ತೆ ಚುನಾವಣೆಗೆ ಸ್ಪರ್ಧಿಸಲಿರುವ ಪದ್ಮರಾಜನ್!

Update: 2024-03-28 13:15 GMT

ಕೆ ಪದ್ಮರಾಜನ್ | Photo: NDTV 

ಮೆಟ್ಟೂರು: ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸಿ 238 ಬಾರಿ ವಿಫಲರಾಗಿದ್ದರೂ, ಕೆ ಪದ್ಮರಾಜನ್ ಅವರು ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮತ್ತೊಮ್ಮೆ ತಯಾರಿ ನಡೆಸುತ್ತಿದ್ದಾರೆ.

ತಮಿಳುನಾಡಿನ ತನ್ನ ತವರು ಮೆಟ್ಟೂರಿನಿಂದ 1988 ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದ 65 ವರ್ಷ ಪದ್ಮರಾಜನ್ ಅವರು, ಟೈರ್ ರಿಪೇರಿ ವೃತ್ತಿ ನಡೆಸುತ್ತಿದ್ದಾರೆ.

ನಿರಂತರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುತ್ತಿದ್ದರೂ, ಜನರ ಅಪಹಾಸ್ಯಕ್ಕೆ ಗುರಿಯಾದರೂ ಪದ್ಮರಾಜನ್ ಅವರು ಧೃತಿಗೆಟ್ಟಿಲ್ಲ, ಬದಲಾಗಿ, ಚುನಾವಣಾ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿ ಭಾಗವಹಿಸಬಹುದು ಎಂದು ಸಾಬೀತುಪಡಿಸಲು ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಹೇಳುತ್ತಾರೆ.

"ಎಲ್ಲಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವನ್ನು ಬಯಸುತ್ತಾರೆ, ಆದರೆ, ನನಗೆ ಗೆಲ್ಲಬೇಕೆಂದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದೇ ನನಗೆ ಗೆಲುವು. ಸೋತರೂ ನನಗೆ ಸಂತಸವಿದೆ” ಎಂದು ಪದ್ಮರಾಜನ್ ಅವರು ಹೇಳುತ್ತಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸಂಸದೀಯ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

"ಚುನಾವಣಾ ರಾಜ" ಎಂದು ಸ್ಥಳೀಯವಾಗಿ ಗುರುತಿಸಲ್ಪಡುವ ಪದ್ಮರಾಜನ್ ಅವರು ಅಧ್ಯಕ್ಷೀಯ ಚುನಾವಣೆಯಿಂದ ಸ್ಥಳೀಯ ಚುನಾವಣೆಗಳವರೆಗೆ ದೇಶಾದ್ಯಂತ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ.

ಎದುರು ಅಭ್ಯರ್ಥಿ ಯಾರಾದರೂ ನಾನು ಹೆದರುವುದಿಲ್ಲ ಎಂದು ಹೇಳುವ ಅವರು ಕಳೆದ ಹಲವು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿಯವರ ವಿರುದ್ಧ ಸ್ಪರ್ಧಿಸಿ ಸೋತಿದ್ದಾರೆ.

ಮೂರು ದಶಕಗಳಿಂದ ಚುನಾವಣಾ ಸ್ಪರ್ಧಿಸುವ ಅವರು ನಾಮಪತ್ರ ಸಲ್ಲಿಸಲು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅದು ಅವರ ಇತ್ತೀಚೆಗೆ ನಾಮಪತ್ರ ಸಲ್ಲಿಸುವಾಗ ₹ 25,000 ಭದ್ರತಾ ಠೇವಣಿ ಇಟ್ಟಿದ್ದು, ಶೇಕಡಾ 16 ಕ್ಕಿಂತ ಹೆಚ್ಚು ಮತಗಳನ್ನು ಗೆಲ್ಲದಿದ್ದರೆ ಠೇವಣಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಭಾರತದ ಅತ್ಯಂತ ವಿಫಲ ಅಭ್ಯರ್ಥಿಯಾಗಿ ಸ್ಥಾನ ಗಳಿಸುವುದು ಅವರ ಉದ್ದೇಶವಾಗಿದೆ.

ಅವರ ಟೈರ್ ರಿಪೇರಿ ಅಂಗಡಿಯ ಜೊತೆಗೆ, ಪದ್ಮರಾಜನ್ ಹೋಮಿಯೋಪತಿ ಔಷಧಿಗಳನ್ನು ಸಹ ನೀಡುತ್ತಾ ಬಂದಿದ್ದಾರೆ.

ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ಹಕ್ಕು ಚಲಾಯಿಸುವುದು ಹಿಂದೆಂದಿಗಿಂತಲೂ ಈಗ ಮುಖ್ಯವಾಗಿದೆ ಎಂದು ಹೇಳುವ ಪದ್ಮರಾಜನ್, ಮತದಾನ ಜನರ ಹಕ್ಕು, ಅವರು ಮತ ಚಲಾಯಿಸಬೇಕು, ಆ ನಿಟ್ಟಿನಲ್ಲಿ ಸೋಲು-ಗೆಲುವು ನನಗೆ ಮುಖ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News