ಉತ್ತರಾಖಂಡ | ಪ್ರವಾಹದಲ್ಲಿ 9 ಸೇನಾ ಸಿಬ್ಬಂದಿ ಸೇರಿದಂತೆ 60ಕ್ಕೂ ಅಧಿಕ ಮಂದಿ ನಾಪತ್ತೆ : ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಉತ್ತರಕಾಶಿ: ಮೇಘಸ್ಫೋಟದಿಂದ ಉತ್ತರಕಾಶಿ ಜಿಲ್ಲೆಯ ಧರಾಲಿ ಪ್ರದೇಶದಲ್ಲಿ ಉಂಟಾದ ದಿಢೀರ್ ಪ್ರವಾಹದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟು, 9 ಸೇನಾ ಸಿಬ್ಬಂದಿ ಸೇರಿದಂತೆ 60ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.
ಸ್ಥಳದಲ್ಲಿ ಭಾರತೀಯ ಸೇನೆ, ಪೊಲೀಸರು, ಎಸ್‌ಡಿಆರ್‌ಎಫ್ ಮತ್ತು ಇತರ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಸುಮಾರು 130 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ʼರಕ್ಷಣಾ ಕಾರ್ಯ ಚುರುಕಾಗಿದೆ. ಸೇನೆ, ಐಟಿಬಿಪಿ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಸುಮಾರು 70 ರಿಂದ 80 ಜನರನ್ನು ರಕ್ಷಿಸಲಾಗಿದೆ. ಅಲ್ಲಿ ಇನ್ನೂ ಮಳೆಯಾಗುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಾಗಿದೆ ಎಂದು ಪುಷ್ಕರ್ ಸಿಂಗ್ ಧಾಮಿ ಹೇಳಿದರು.
ಔಷಧಗಳು ಮತ್ತು ಆಹಾರಕ್ಕಾಗಿ ವ್ಯವಸ್ಥೆ ಮಾಡಲಾಗಿದೆ ಮತ್ತು ಪಡಿತರ ವಿತರಣೆಯನ್ನು ಮೇಲ್ವಿಚಾರಣೆ ಮಾಡಲು 160 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಖ್ಯಮಂತ್ರಿ ಕಚೇರಿಯಿಂದ ಮೂವರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿಯೊಂದು ಜೀವವೂ ನಮಗೆ ಮುಖ್ಯ. ಪ್ರವಾಹದಲ್ಲಿ ಸಿಲುಕಿರುವವರ ಪತ್ತೆಗಾಗಿ
ಭಾರತೀಯ ಸೇನೆಯು ತನ್ನ ಎಂಐ -17 ಮತ್ತು ಚಿನೂಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ಕನಿಷ್ಠ 60 ಜನರು ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತದೆ ಎಂದು ಹೇಳಿದ್ದಾರೆ.
ಆರಂಭದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾದ 11 ಸೇನಾ ಸಿಬ್ಬಂದಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಲೆಫ್ಟಿನೆಂಟ್ ಕರ್ನಲ್ ಶ್ರೀವಾಸ್ತವ ಹೇಳಿದ್ದಾರೆ.