ಧುಪ್ಗುರಿ ಅಸೆಂಬ್ಲಿ ಉಪ ಚುನಾವಣೆ: ಬಿಜೆಪಿ ಸ್ಥಾನ ಕಸಿದುಕೊಂಡ ಟಿಎಂಸಿ
ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದ ಧುಪ್ಗುರಿ ಅಸೆಂಬ್ಲಿ ಸ್ಥಾನವನ್ನು ಬಿಜೆಪಿಯಿಂದ ವಶಪಡಿಸಿಕೊಂಡಿದೆ. ಟಿಎಂಸಿ ಅಭ್ಯರ್ಥಿ ನಿರ್ಮಲ್ ಚಂದ್ರ ರಾಯ್ 4,500 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.
ಈ ವರ್ಷದ ಆರಂಭದಲ್ಲಿ ಹಾಲಿ ಬಿಜೆಪಿ ಶಾಸಕ ಬಿಶು ಪದಾ ರೇ ಅವರ ನಿಧನದ ನಂತರ ಜಲ್ಪೈಗುರಿ ಜಿಲ್ಲೆಯ ಧುಪ್ಗುರಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು.
ಆರಂಭಿಕ ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ, ತೃಣಮೂಲ ಪಕ್ಷವು ರಾಜ್ಬನ್ಶಿ ನೆಲದಲ್ಲಿ ಹಿನ್ನಡೆಯಿಂದ ಚೇತರಿಸಿಕೊಂಡಿತು.
"ಧುಪ್ಗುರಿ (ಉಪಚುನಾವಣೆ) ಫಲಿತಾಂಶವು ಬಂಗಾಳದ ಜನರು ಮಮತಾ ಬ್ಯಾನರ್ಜಿ ಅವರೊಂದಿಗೆ ಇದ್ದಾರೆ ಎಂಬುದನ್ನು ತೋರಿಸುತ್ತದೆ" ಎಂದು ಟಿಎಂಸಿ ವಕ್ತಾರ ರಿಜು ದತ್ತಾ ಪಿಟಿಐಗೆ ತಿಳಿಸಿದರು.
ಎಸ್ ಸಿ-ಮೀಸಲಾತಿ ಕ್ಷೇತ್ರವಾಗಿರುವ ಧುಪ್ಗುರಿ ಸುಮಾರು 50 ಪ್ರತಿಶತ ರಾಜ್ಬನ್ಷಿ ಹಾಗೂ 15 ಪ್ರತಿಶತ ಅಲ್ಪಸಂಖ್ಯಾತ ಜನಸಂಖ್ಯೆಯನ್ನು ಹೊಂದಿದೆ. ರಾಜಬನ್ಶಿ ಮತಗಳನ್ನು ಸೆಳೆಯಲು ಎಲ್ಲಾ ಪ್ರಮುಖ ಪಕ್ಷಗಳು ಅದೇ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
ಟಿಎಂಸಿಯ ನಿರ್ಮಲ್ ಚಂದ್ರ ರಾಯ್ ಅವರು ಧುಪ್ಗುರಿ ಗರ್ಲ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಹಾಗೂ ರಾಜಬಂಶಿ ಸಮುದಾಯಕ್ಕೆ ಸೇರಿದವರು. 2021 ರಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ CRPF ಯೋಧನ ಪತ್ನಿ ತಪಸಿ ರಾಯ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿಸಿತ್ತು. CPI(M) ಜನಪದ ಗಾಯಕ ಈಶ್ವರ್ ಚಂದ್ರ ರಾಯ್ ಅವರನ್ನು ಕಣಕ್ಕಿಳಿಸಿತ್ತು ಹಾಗೂ ಕಾಂಗ್ರೆಸ್ ಅವರನ್ನು ಬೆಂಬಲಿಸಿತ್ತು.