×
Ad

ಅಂಗವಿಕಲ ವ್ಯಕ್ತಿಯ ಕೊಲೆಗೈದು ಸಿಮೆಂಟ್‍ನಲ್ಲಿ ಮುಳುಗಿಸಿ ಸೂಟ್‍ಕೇಸ್‍ನಲ್ಲಿ ಮೃತದೇಹ ಹುದುಗಿಸಿಟ್ಟ ದಂಪತಿ

Update: 2025-06-25 08:11 IST

ರಾಯಪುರ: ಅಂಗವಿಕಲರೊಬ್ಬರನ್ನು ಕೊಲೆ ಮಾಡಿ ಸಿಮೆಂಟ್‍ನಲ್ಲಿ ಮುಳುಗಿಸಿ ಶವವನ್ನು ಸೂಟ್‍ಕೇಸ್‍ನಲ್ಲಿ ಇರಿಸಿ ಅದನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಎಸೆದು ಹೋದ ಘಟನೆ ಛತ್ತೀಸ್‍ಗಢ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.

ಕೊಲೆ ಪ್ರಕರಣದ ರಹಸ್ಯ ಬೇಧಿಸಲು ತನಿಖೆ ನಡೆಸಿದ ಪೊಲೀಸರು ಈ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದು, ಈ ಸಂಬಂಧ ಮಂಗಳವಾರ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಕರಣದ ಸೂತ್ರಧಾರರು ಎನ್ನಲಾದ ದಂಪತಿಯನ್ನು ಬಂಧಿಸಿದ್ದಾರೆ.

ರಾಯಪುರದ ವಕೀಲ ಅಂಕಿತ್ ಹಾಗೂ ಆತನ ಪತ್ನಿ ಈ ಕೃತ್ಯ ಎಸಗಿದ್ದಾರೆ ಎಂದು ಆರಂಭಿಕ ತನಿಖೆಯಿಂದ ತಿಳಿದು ಬಂದಿದ್ದು, ಭೂಮಿ ದಲ್ಲಾಳಿ ವ್ಯಾಜ್ಯದ ಹಿನ್ನೆಲೆಯಲ್ಲಿ ಕಿಶೋರ್ ಪೈಕ್ರಾ ಅವರ ಕೊಲೆ ನಡೆದಿದೆ ಎಂದು ರಾಯಪುರ ಎಸ್‍ಎಸ್ಪಿ ಲಾಲ್ ಉಮೇದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಅಂಕಿತ್ ತಂದೆ ಛತ್ತೀಸ್‍ಗಢ ಪೊಲೀಸ್ ಇಲಾಖೆಯಲ್ಲಿ ಎಎಸ್‍ಐ ಆಗಿ ನಿವೃತ್ತರಾಗಿದ್ದು, ಅವರ ಪತ್ನಿ ಕೂಡಾ ಪೈಕ್ರಾ ಅವರ ಮೃತದೇಹ ಪತ್ತೆಯಾದ ಸ್ಥಳದ ಸಿಸಿಟಿವಿ ದೃಶ್ಯಾವಳಿ ತಪಾಸಣೆ ವೇಳೆ ಪತ್ತೆಯಾಗಿದ್ದಾರೆ. ಸೋಮವಾರ ರಾಯಪುರದ ಡಿಡಿ ನಗರ ಪ್ರದೇಶವನ್ನು ಪ್ರವೇಶಿಸಿದ ಕಾರಿನಿಂದ ಇಳಿದ ಇಬ್ಬರು ಮೃತದೇಹ ಹೊಂದಿದ್ದ ಟ್ರಂಕ್ ಹೊರತೆಗೆದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಮುಖ ಮುಚ್ಚಿಕೊಂಡಿರುವ ಮಹಿಳೆ ಕಾರಿನ ಹಿಂದೆ ದ್ವಿಚಕ್ರ ವಾಹನದಲ್ಲಿ ಬಂದಿದ್ದಾಳೆ. ಕಾರಿನ ನಂಬರ್ ಪ್ಲೇಟ್ ಜಜ್ಜಿಹಾಕಲಾಗಿತ್ತು.

ಸಂತ್ರಸ್ತ ವ್ಯಕ್ತಿ ಮೊಹದಿ ಗ್ರಾಮದಲ್ಲಿರುವ ತನ್ನ ಭೂಮಿಯನ್ನು ಅಂಕಿತ್ ನೆರವಿನಿಂದ 50 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ಎನ್ನಲಾಗಿದ್ದು, ಒಪ್ಪಿಕೊಂಡ ಬೆಲೆಗಿಂತ 20 ಲಕ್ಷ ರೂಪಾಯಿ ಕಡಿಮೆ ಹಣವನ್ನು ಈತನಿಗೆ ನೀಡಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡುವ ಬೆದರಿಕೆ ಹಾಕಿದ್ದರಿಂದ ಅಂಕಿತ್ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಂಧಿತ ದಂಪತಿಯನ್ನು ರಾಯಪುರಕ್ಕೆ ಮಂಗಳವಾರ ರಾತ್ರಿ ಕರೆ ತರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News