ದಾರಿ ತಪ್ಪಿಸುವ ಯುಪಿಎಸ್‌ಸಿ ಆಯ್ಕೆ ಜಾಹೀರಾತು : ದೃಷ್ಟಿ ಐಎಎಸ್‌ಗೆ 5 ಲಕ್ಷ ರೂ. ದಂಡ
PC - FB
ಹೊಸದಿಲ್ಲಿ, ಅ. 4: ಯುಪಿಎಸ್‌ಸಿ ಸಿಎಸ್ಇ 2022ರ ಆಯ್ಕೆ ಕುರಿತು ದಾರಿತಪ್ಪಿಸುವ ಜಾಹೀರಾತು ಪ್ರಕಟಿಸಿರುವುದಕ್ಕಾಗಿ ‘ದೃಷ್ಟಿ ಐಎಎಸ್’ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಶುಕ್ರವಾರ 5 ಲಕ್ಷ ರೂ.ದಂಡ ವಿಧಿಸಿದೆ.
ಅಲ್ಲದೆ, ತರಬೇತಿ ಸಂಸ್ಥೆಗಳು ಯಾವುದೇ ಪ್ರಮುಖ ಮಾಹಿತಿಯನ್ನು ಮುಚ್ಚಿಡದೆ, ಬಹಿರಂಗವಾಗಿ ಹಾಗೂ ಸ್ಪಷ್ಟವಾಗಿ ಹಂಚಿಕೊಳ್ಳುವಂತೆ ಸೂಚಿಸಿದೆ.
‘ದೃಷ್ಟಿ ಐಎಎಸ್’ ಯುಪಿಎಸ್‌ಸಿ ಸಿಎಸ್ಇ 2022ರಲ್ಲಿ 216+ ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಅವರ ಫೋಟೊಗಳೊಂದಿಗೆ ಜಾಹೀರಾತು ನೀಡಿತ್ತು. ಆದರೆ, 216ರಲ್ಲಿ 162 ಅಥವಾ ಶೇ.75 ಅಭ್ಯರ್ಥಿಗಳು ಮಾತ್ರ ಸಂಸ್ಥೆಯ ಉಚಿತ ಮಾರ್ಗದರ್ಶನ ಕಾರ್ಯಕ್ರಮ (ಐಜಿಪಿ)ದಲ್ಲಿ ತರಬೇತಿ ಪಡೆದುಕೊಂಡಿದ್ದರು. ಅನಂತರ ಅವರು ಯುಪಿಎಸ್‌ಸಿ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಯನ್ನು ಸ್ವಂತ ಪರಿಶ್ರಮದಿಂದ ಉತ್ತೀರ್ಣರಾಗಿದ್ದರು. ಇತರರು ಐಜಿಪಿ ಪ್ಲಸ್ ಹಾಗೂ ಇತರ ಕೋರ್ಸ್‌ಗಳಿಗೆ ಸೇರಿದ್ದರು ಎಂಬುದನ್ನು ಸಿಸಿಪಿಎ ಪತ್ತೆ ಮಾಡಿತ್ತು.
ಯುಪಿಎಸ್ಸಿ ಪರೀಕ್ಷೆಯ ಎಲ್ಲಾ ಹಂತಗಳಲ್ಲಿ ಅವರ ಯಶಸ್ವಿಗೆ ‘ದೃಷ್ಟಿ ಐಎಎಸ್’ ಕಾರಣ ಎಂದು ಆಕಾಂಕ್ಷಿಗಳು ಹಾಗೂ ಅವರ ಪೋಷಕರನ್ನು ನಂಬುವಂತೆ ಮಾಡಲು ಅದು ಮುಖ್ಯ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆ ಮಾಚಿತ್ತು. ಆದುದರಿಂದ ಅದರ ಜಾಹೀರಾತು ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಸೆಕ್ಷನ್ 2 (28)ಅಡಿಯಲ್ಲಿ ದಾರಿತಪ್ಪಿಸುವ ಜಾಹೀರಾತಿಗೆ ಸಮಾನವಾಗಿದೆ ಎಂದು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.