ಮಹಾರಾಷ್ಟ್ರ| ‘ದೃಶ್ಯಂ' ಮಾದರಿಯ ಹತ್ಯೆ ಪ್ರಕರಣ ಬಯಲಿಗೆ: ಪತಿಯ ಮೃತ ದೇಹವನ್ನು ಟೈಲ್ಸ್ ಕೆಳಗೆ ಅಡಗಿಸಿಟ್ಟಿದ್ದ ಪತ್ನಿ!
PC : NDTV
ಮುಂಬೈ: ಮಾಲಿವುಡ್ ನ ಬ್ಲಾಕ್ ಬಸ್ಟರ್ ‘ದೃಶ್ಯಂ’ ಚಲನಚಿತ್ರ ಸಾಮಾಜಿಕ ವಲಯದಲ್ಲಿ ಮತ್ತೆ ಮತ್ತೆ ಆಘಾತಕಾರಿ ತರಂಗಗಳನ್ನೆಬ್ಬಿಸುತ್ತಿದ್ದು, ಈ ಚಿತ್ರದ ಮಾದರಿಯಂತಹುದೇ ಹತ್ಯಾ ಪ್ರಕರಣವೊಂದು ಮುಂಬೈ ಬಳಿ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮಹಿಳೆಯೊಬ್ಬರು ತನ್ನ ಪ್ರಿಯಕರನ ನೆರವಿನೊಂದಿಗೆ ತನ್ನ ಪತಿಯನ್ನು ಹತ್ಯೆಗೈದು, ಆತನ ಮೃತ ದೇಹವನ್ನು ಮನೆಯೊಳಗೆ ಅಡಗಿಸಿಟ್ಟಿದ್ದಳು ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಆರೋಪಿ ಮಹಿಳೆಯ 35 ವರ್ಷದ ಪತಿ ವಿಜಯ್ ಚವಾಣ್ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಅವರು ತಮ್ಮ 28 ವರ್ಷದ ಪತ್ನಿ ಕೋಮಲ್ ಚವಾಣ್ ರೊಂದಿಗೆ ಮುಂಬೈನಿಂದ 70 ಕಿಮೀ ದೂರವಿರುವ ನಲಸೋಪರ ಪೂರ್ವದ ಗಡ್ಗಪಾದ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ವಿಜಯ್ ಗಾಗಿ ಹುಡುಕಾಟ ನಡೆಸುತ್ತಿದ್ದ ಅವರ ಸಹೋದರರು ಸೋಮವಾರ ಬೆಳಗ್ಗೆ ಅವರ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರಿಗೆ ಕೆಲವು ನೆಲಹಾಸುಗಳು ಉಳಿದ ನೆಲಹಾಸುಗಳ ಬಣ್ಣದೊಂದಿಗೆ ಹೋಲಿಕೆಯಾಗದಿರುವುದು ಕಂಡು ಬಂದಿದೆ. ಇದರಿಂದ ಅನುಮಾನಗೊಂಡಿರುವ ಅವರು, ವಿಭಿನ್ನ ಬಣ್ಣದ ನೆಲಹಾಸನ್ನು ತೆರೆದಾಗ, ನೆಲದಡಿ ಬನಿಯನ್ ಒಂದು ಹುದುಗಿರುವುದು ಹಾಗೂ ಅಲ್ಲಿಂದ ದುರ್ವಾಸನೆ ಬರುತ್ತಿರುವುದು ಕಂಡು ಬಂದಿದೆ. ತಕ್ಷಣವೇ ಅವರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅವರ ಸಂಶಯ ನಿಜವಾಗಿದ್ದು, ನೆಲದಡಿ ಅವರ ಸಹೋದರನ ಮೃತ ದೇಹವನ್ನು ಹುದುಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೀಗಾಗಿ, ಎರಡು ದಿನಗಳಿಂದ ತನ್ನ ನೆರೆಮನೆಯ ಮೋನು ಎಂಬ ವ್ಯಕ್ತಿಯೊಂದಿಗೆ ನಾಪತ್ತೆಯಾಗಿದ್ದ ಕೋಮಲ್, ತನ್ನ ಪತಿ ವಿಜಯ್ ನನ್ನು ಹತ್ಯೆಗೈದಿರಬಹುದು ಎಂದು ಅವರು ಶಂಕಿಸಿದ್ದಾರೆ. ಈ ಇಬ್ಬರೂ ಈ ಹತ್ಯೆ ಪ್ರಕರಣದ ಪ್ರಮುಖ ಶಂಕಿತ ಆರೋಪಿಗಳಾಗಿದ್ದು, ಅವರಿಬ್ಬರ ನಡುವೆ ಪ್ರಣಯ ಸಂಬಂಧವಿತ್ತು ಎಂದು ಹೇಳಲಾಗಿದೆ.