ʼಕರ್ನಾಟಕದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮʼ: ದಾಖಲೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ
ಚುನಾವಣಾ ಆಯೋಗ, ಬಿಜೆಪಿ ವಿರುದ್ಧ ವಾಗ್ದಾಳಿ
ರಾಹುಲ್ ಗಾಂಧಿ (Photo: X/PTI)
ಹೊಸದಿಲ್ಲಿ,ಆ.7: ದೇಶಾದ್ಯಂತ ಬಿಜೆಪಿಯು ಮತಗಳ್ಳತನ ನಡೆಸುತ್ತಿದ್ದು, ಅದರೊಂದಿಗೆ ಚುನಾವಣಾ ಆಯೋಗ ಕೂಡಾ ಶಾಮೀಲಾಗಿದೆಯೆಂದು ಲೋಕಸಭೆಯ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್‌ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಹೊಸದಿಲ್ಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌ಗಾಂಧಿ, ಬಿಜೆಪಿಯು ಮತಗಳ್ಳತನ ನಡೆಸುತ್ತಿದೆಯೆಂಬುದಕ್ಕೆ ನಿದರ್ಶನವಾಗಿ ಕರ್ನಾಟಕದ ಮಹಾದೇವಪುರ ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಯಲ್ಲಿ ನಡೆದಿದೆಯೆನ್ನಲಾದ ಅಕ್ರಮಗಳ ಕುರಿತ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಮತಗಳ್ಳತನ ನಡೆದಿದ್ದು, 6.5 ಲಕ್ಷ ಮತಗಳ ಪೈಕಿ 1 ಲಕ್ಷಕ್ಕೂ ಅಧಿಕ ಮತಗಳ್ಳತನ ನಡೆದಿದೆಯೆಂದು ಅವರು ಆಪಾದಿಸಿದ್ದಾರೆ.
ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ನಕಲಿ ಮತದಾರರು, ಅಮಾನ್ಯವಾದ ವಿಳಾಸಗಳು ಹಾಗೂ ಸಾರಾಸಗಟಾಗಿ ಮತದಾರರ ಸೇರ್ಪಡೆಯನ್ನು ಕಾಂಗ್ರೆಸ್ ಪಕ್ಷವು ಆಂತರಿಕ ಅಧ್ಯಯನವು ಪತ್ತೆಹಚ್ಚಿದೆಯೆಂದು ಅವರು ಹೇಳಿದ್ದಾರೆ. ಈ ಕುರಿತ ದಾಖಲೆಗಳನ್ನು ಅವರು ಪತ್ರಿಕಾಗೋಷ್ಟಿಯಲ್ಲಿ ನೀಡಿದ್ದಾರೆ.
ಮಹಾದೇವಪುರ ಕ್ಷೇತ್ರದಲ್ಲಿ 1,00,250 ‘ಮತಗಳ ಕಳ್ಳತನ’ ನಡೆದಿದೆಯೆಂದು ರಾಹುಲ್ ಆಪಾದಿಸಿದ್ದಾರೆ. ಈ ಪೈಕಿ 11,965 ನಕಲಿ ಮತದಾರರು, 40,009 ಖೋಟಾ ಮತ್ತು ಅಮಾನ್ಯ ವಿಳಾಸವಿರುವ ಮತದಾರರು, 10,452 ಮತದಾರರು ಒಂದೇ ವಿಳಾಸಗಳಲ್ಲಿ ದೊಡ್ಡ ಸಂಖ್ಯೆಯಲ್ಲಿರುವವರಾಗಿದ್ದಾರೆ. 4,132 ಮಂದಿ ಮತದಾರರ ಫೋಟೋಗಳು ಅಮಾನ್ಯವಾಗಿವೆ ಎಂದು ರಾಹುಲ್ ಗಾಂಧಿ ಆಪಾದಿಸಿದರು.
ದೇಶಾದ್ಯಂತ ಇದೇ ರೀತಿಯ ಚುನಾವಣಾ ಆಕ್ರಮಗಳು ನಡೆದಿದ್ದು, ಇದು ದೇಶದ ಸಂವಿಧಾನ ಹಾಗೂ ಸಮಗ್ರತೆಯ ವಿರುದ್ಧ ಎಸಗಿದ ಅಪರಾಧವೆಂದು ಅವರು ಆಪಾದಿಸಿದರು.
► ಇಲೆಕ್ಟ್ರಾನಿಕ್ ಮತದಾರಪಟ್ಟಿ ಯಾಕಿಲ್ಲ?
ಚುನಾವಣಾ ಆಯೋಗವು ಮತದಾರಪಟ್ಟಿಗಳನ್ನು ಇಲೆಕ್ಟ್ರಾನಿಕ್ ರೂಪದಲ್ಲಿ ನೀಡದೆ ಇರುವ ಬಗ್ಗೆಯೂ ರಾಹುಲ್ ಸಂದೇಹ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಇಲೆಕ್ಟ್ರಾನಿಕ್ ಸ್ವರೂಪದಲ್ಲಿ ಮತದಾರ ಪಟ್ಟಿಯನ್ನು ಪ್ರಕಟಿಸಿದಲ್ಲಿ 30 ಸೆಕೆಂಡ್‌ಗಳೊಳಗೆ ಚುನಾವಣಾ ಅಕ್ರಮವನ್ನು ಬಯಲಿಗೆಳೆಯಲು ಸಾಧ್ಯವೆಂದು ಅವರು ಹೇಳಿದರು.
‘ಮತದಾರಪಟ್ಟಿಯಲ್ಲಿ ಮತದಾರನ ಹೆಸರು ಎರಡು ಬಾರಿ ನಮೂದಾಗಿದೆಯೇ ಅಥವಾ ಆತ ಎರಡು ಸಲ ಮತಚಲಾಯಿಸಿದ್ದಾನೆಯೇ ಎಂಬುದನ್ನು ಪತ್ತೆಹಚ್ಚಲು ಶಂಕಿತ ಮತದಾರನ ಗುರುತುಚೀಟಿ(ಎಪಿಕ್)ಯೊಂದಿಗೆ ಅದನ್ನು ಮತದಾರಪಟ್ಟಿಯಲ್ಲಿರುವ ಫೋಟೋಗಳ ಜೊತೆ ಹೋಲಿಸಿ ನೋಡುವುದು ತುಂಬಾ ತ್ರಾಸದಾಯಕ ಕೆಲಸವಾಗಿರುತ್ತದೆ.
ಆದರೆ ಚುನಾವಣಾ ಆಯೋಗವು ಮತದಾರ ಪಟ್ಟಿಯ ಇಲೆಕ್ಟ್ರಾನಿಕ್ ದತ್ತಾಂಶಗಳನ್ನು ನೀಡಿದಲ್ಲಿ ಕೇವಲ 30 ಸೆಕೆಂಡುಗಳಲ್ಲಿ ಪತ್ತೆಹಚ್ಚಬಹುದಾಗಿತ್ತು ಎಂದರು. ಮಹಾದೇವಪುರದಲ್ಲಿ ಮತದಾರಪಟ್ಟಿಯಲ್ಲಿ ಅಕ್ರಮಗಳು ನಡೆದಿರುವುದ್ನು ಪತ್ತೆಹಚ್ಚಲು ನಮಗೆ ಆರು ತಿಂಗಳುಗಲೇ ಬೇಕಾದವು. ಮತದಾರ ಪಟ್ಟಿಯನ್ನು ಇಲೆಕ್ಟ್ರಾನಿಕ್ ರೂಪದಲ್ಲಿ ಪ್ರಕಟಿಸದಿರುವುದು, ಕಾನೂನುಗಳಲ್ಲಿ ಮಾರ್ಪಾಡು ಮಾಡಿ ಮತದಾನ ಕುರಿತ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡದೆ ಇರುವುದು ಚುನಾವಣಾ ಆಯೋಗವು ಬಿಜೆಪಿಯ ಮತಗಳ್ಳತನದಲ್ಲಿ ಶಾಮೀಲಾಗಿದೆಯೆಂಬುದು ನಮಗೆ ಮನವರಿಕೆಯಾಗಿದೆ.
ಓರ್ವ ವ್ಯಕ್ತಿಯು ಒಂದೇ ಮತವನ್ನು ಹೊಂದಿರುತ್ತಾನೆ ಎಂದು ವಾಸ್ತವಾಂಶವನ್ನು ನಮ್ಮ ಸಂವಿದಾನ ಆಧರಿಸಿದೆ. ನಾವು ಚುನಾವಣೆಗಳತ್ತ ದೃಷ್ಟಿ ಹಾಯಿಸಿದಾಗ, ಓರ್ವ ವ್ಯಕ್ತಿ, ಒಂದು ಮತ ಎಂಬ ಮೂಲಭೂತ ಅಂಶವನ್ನು ಭದ್ರಪಡಿಸಬೇಕಾಗಿದೆ. ಕಳೆದ ಕೆಲವು ಸಮಯದಿಂದ ಜನರಲ್ಲಿ ಚುನಾವಣೆಗಳ ಬಗ್ಗೆ ಸಂದೇಹವುಂಟಾಗಿದೆ. ಆಡಳಿತ ವಿರೋಧಿ ಅಲೆ ಪ್ರತಿಯೊಂದು ಪಕ್ಷವನ್ನು ಬಾಧಿಸುತ್ತಲೇ ಬರುತ್ತದೆ. ಆದರೆ ಪ್ರಜಾತಾಂತ್ರಿಕ ಚೌಕಟ್ಟಿನಲ್ಲಿ ಆಡಳಿತ ವಿರೋಧಿ ಅಲೆಯಿಂದ ಬಾಧಿತವಾಗದ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದು ರಾಹುಲ್ ವ್ಯಂಗ್ಯವಾಡಿದರು.
► ಮಹಾದೇವಪುರದಲ್ಲಿ 40,009 ಮತದಾರರ ವಿಳಾಸ ನಕಲಿ
ಮಹಾದೇವಪುರದಲ್ಲಿ ನಕಲಿ ವಿಳಾಸಗಳಿರುವ 40,009 ಮತದಾರರಿದ್ದಾರೆ. ಮನೆಸಂಖ್ಯೆ ‘0’ ಎಂದು ಅವರು ಮತದಾರಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ 46 ಮಂದಿ ಒಂದೇ ವಿಳಾಸದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಅವರ್ಯಾರೂ ಆ ವಿಳಾಸದಲ್ಲಿ ವಾಸವಾಗಿರಲಿಲ್ಲವೆಂದು ಅಲ್ಲಿಗೆ ಭೇಟಿ ನೀಡಿದಾಗ ತಿಳಿದು ಬಂದಿತು. ಅದೇ ರೀತಿ 40 ಸಾವಿರ ಮತದಾರರು ನಕಲಿ ವಿಳಾಸಗಳನ್ನು ಹೊಂದಿದ್ದರೆ, 4 ಸಾವಿರ ಮತದಾರರು ಫೋಟೋಗಳನ್ನು ಹೊಂದಿಲ್ಲವೆಂದು ಅವರು ಹೇಳಿದ್ದಾರೆ.
ಬಿಜೆಪಿಯ ಮತಗಳ್ಳತನದ ವಿರುದ್ಧ ಬೆಂಗಳೂರಿನಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ರಾಹುಲ್ ತಿಳಿಸಿದರು.
► ಮಹಾರಾಷ್ಟ್ರ, ಹರ್ಯಾಣಗಳಲ್ಲಿ ಮತದಾನೋತ್ತರ ಸಮೀಕ್ಷೆ ಹುಸಿಯಾದ ಬಗ್ಗೆ ರಾಹುಲ್ ಸಂದೇಹ
ಹರ್ಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಹುಸಿಯಾಗಿರುವುದನ್ನು ಕೂಡಾ ರಾಹುಲ್ ಪ್ರಶ್ನಿಸಿದ್ದಾರೆ. ಹರ್ಯಾಣದಲ್ಲಿ ಕಾಂಗ್ರೆಸ್ ಹಾಗೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅಂಗಪಕ್ಷವಾಗಿರುವ ಮಹಾಯುತಿ ಮೇಲುಗೈ ಸಾಧಿಸಲಿದೆಯೆಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಎರಡೂ ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶ ಸಂಪೂರ್ಣ ತಿರುಗುಮುರುಗಾಗಿತ್ತು. ಚುನಾವಣೆಯಲ್ಲಿ ಅಕ್ರಮಗಳು ನಡೆಯುತ್ತಿವೆಯೆಂಬ ತನ್ನ ಸಂದೇಹವನ್ನು ಇದು ಬಲಪಡಿಸಿದೆಯೆಂದು ಅವರು ಹೇಳಿದ್ದಾರೆ.
► ಪುರಾವೆ ನೀಡಿ: ರಾಹುಲ್‌ಗೆ ಚು. ಆಯೋಗ ಸೂಚನೆ
ಲೋಕಸಭಾ ಚುನಾವಣೆಯ ಸಂದರ್ಭ ರಾಜ್ಯದ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆಯೆಂಬ ಆರೋಪ ಮಾಡಿರುವುದನ್ನು ಒಪ್ಪಿಕೊಳ್ಳುವ ಘೋಷಣಾ ಪತ್ರಕ್ಕೆ ಸಹಿಹಾಕಿ ಅದನ್ನು ಸಲ್ಲಿಸುವಂತೆ ಕರ್ನಾಟಕ ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತಿಳಿಸಿದೆ. ಆರೋಪಕ್ಕೆ ಸಂಬಂಧಿಸಿದ ಪುರಾವೆಗಳನ್ನು ಕೂಡಾ ಒದಗಿಸುವಂತೆ ಅವರಿಗೆ ಸೂಚಿಸಿದೆ.
ಮತದಾರಪಟ್ಟಿಯಲ್ಲಿ ಅರ್ಹ ಮತದಾರರನ್ನು ಹೊರಗಿಟ್ಟಿರುವ ಹಾಗೂ ಅನರ್ಹರನ್ನು ಸೇರ್ಪಡೆಗೊಂಡವರ ಹೆಸರುಗಳನ್ನು ತನ್ನೊಂದಿಗೆ ಹಂಚಿಕೊಳ್ಳುವಂತೆಯೂ ಪತ್ರದಲ್ಲಿ ತಿಳಿಸಿದೆ.
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಯವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಈ ಬಗ್ಗೆ ಪತ್ರವೊಂದನ್ನು ಬರೆದು ರಾಜ್ಯದ ಮತದಾರಪಟ್ಟಿಯ ಕುರಿತು ತನಿಖೆಯಾಗಬೇಕೆಂದು ಕೋರುವ ಅಫಿಡವಿಟ್ ಅನ್ನು ತನಗೆ ಸಲ್ಲಿಸುವಂತೆ ಸೂಚಿಸಿದೆ.
‘‘ನಿಮಗೆ ತಿಳಿದಿರುವಂತೆ ಮತದಾರಪಟ್ಟಿಯನ್ನು 1960ರ ಚುನಾವಣಾ ಕಾನೂನುಗಳ ನೊಂದಣಿ, 1950ರ ಜನತಾ ಪ್ರಾತಿನಿಧ್ಯ ಕಾಯ್ದೆ ಹಾಗೂ ಭಾರತೀಯ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಪಾರದರ್ಶಕವಾಗಿ ಸಿದ್ಧಪಡಿಸಲಾಗಿದೆ ಹಾಗೂ ಚುನಾವಣಾ ಫಲಿತಾಂಶದ ಬಗ್ಗೆ ತಕರಾರಿದ್ದಲ್ಲಿ ಅದನ್ನು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಪ್ರಶ್ನಿಸಬಹುದಾಗಿದೆ’’ ಎಂದು ಆಯೋಗವು ಅಧಿಸೂಚನೆಯಲ್ಲಿ ತಿಳಿಸಿದೆ. ಗುರುವಾರ ಸಂಜೆಯೊಳಗೆ ರಾಹುಲ್ ಅವರ ಅಫಿಡವಿಟ್ ಅನ್ನು ಸ್ವೀಕರಿಸುವ ನಿರೀಕ್ಷೆಯನ್ನು ತಾನು ಹೊಂದಿರುವುದಾಗಿ ಅದು ಹೇಳಿದೆ. ಇಲ್ಲದೆ ಇದ್ದಲ್ಲಿ ಅವರು ತಮ್ಮ ಕಪೋಲಕಲ್ಪಿತ ಪುರಾವೆಯನ್ನು ಹಿಂಪಡೆಯಬೇಕು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಆಯೋಗವು ಮತದಾನಕ್ಕೆ ಸಂಬಂಧಿಸಿದಂತೆ ಕಳೆದ 10-15 ವರ್ಷಗಳ ದಾಖಲೆಗಳನ್ನು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
► ರಾಹುಲ್‌ಗಾಂಧಿಯಿಂದ ಬೇಜವಾಬ್ದಾರಿ, ಲಜ್ಜೆಗೇಡು ಹೇಳಿಕೆ: ಬಿಜೆಪಿ
ಹೊಸದಿಲ್ಲಿ,ಆ.7: ಚುನಾವಣಾ ಆಯೋಗವು ಬಿಜೆಪಿ ಜೊತೆ ಶಾಮೀಲಾಗಿ ಮತಗಳ್ಳತನದಲ್ಲಿ ತೊಡಗಿದೆಯೆಂಬ ರಾಹುಲ್ ಗಾಂಧಿಯವರ ಆರೋಪವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಕಾಂಗ್ರೆಸ್ ನಾಯಕನ ಹೇಳಿಕೆ ಬೇಜವಾಬ್ದಾರಿಯತ ಹಾಗೂ ಲಜ್ಜೆಗೇಡು ಎಂದು ಕಿಡಿಕಾರಿದೆೆ. ಆಧಾರರಹಿತ ಆರೋಪಗಳನ್ನು ಮಾಡುವುದು ಮಾನಹಾನಿ ಮೊಕದ್ದಮೆಗಳನ್ನು ಎದುರಿಸುವುದು ಹಾಗೂ ಆನಂತರ ಕ್ಷಮೆಯಾಚಿಸುವುದು ರಾಹುಲ್ ಅವರಿಗೆ ಅಭ್ಯಾಸವಾಗಿಬಿಟ್ಟಿದೆಯೆಂದು ಹಿರಿಯ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಆಪಾದಿಸಿದ್ದಾರೆ.
ಅಧಿಕಾರದಿಂದ ಹೊರಗುಳಿದ ಬಳಿಕ ರಾಹುಲ್ ಅವರು ನೆಮ್ಮದಿಯನ್ನು ಕಳೆದುಕೊಂಡಿದ್ದಾರೆಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಟೀಕಿಸಿದ್ದಾರೆ. ಸೈದ್ಧಾಂತಿಕವಾಗಿ ಟೊಳ್ಳಾಗಿರುವ ಕಾಂಗ್ರೆಸ್ ಪಕ್ಷವು ಸಾಂವಿಧಾನಿಕ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿಯನ್ನು ನಡೆಸುತ್ತಿದೆ.ಇದರ ಹಿಂದೆ ಭಾರತೀಯ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿರುದ್ಧ ಬೃಹತ್ ಸಂಚೊಂದು ನಡೆಯುತ್ತಿರುವ ಸಾಧ್ಯತೆಯನ್ನು ಕೂಡಾ ಅಲ್ಲಗಳೆಯಲಾಗದು ಎಂದು ಪ್ರಧಾನ್ ಆಪಾದಿಸಿದರು.